ಹುಬ್ಬಳ್ಳಿ:ನಗರದಬಿಆರ್ಟಿಎಸ್ತಂಗುದಾಣಗಳು ದೇವರ ಹಳೇ ಫೋಟೊಗಳನ್ನು ಎಸೆಯುವ ತಾಣವಾಗುತ್ತಿವೆ ಎಂದು ಧಾರವಾಡ ನೇಚರ್ ರಿಸರ್ಚ್ ಸೆಂಟರ್ ಅಸಮಾಧಾನ ವ್ಯಕ್ತಪಡಿಸಿದೆ.
ಹುಬ್ಬಳ್ಳಿಯ ಶ್ರೀನಗರ ವೃತ್ತದ ಬಳಿಯ ಬಿಆರ್ಟಿಎಸ್ ಬಸ್ ನಿಲ್ದಾಣ ಹಾಗೂ ಪ್ಲೈ ಓವರ್ನಲ್ಲಿ ಶಿಥಿಲಗೊಂಡ ದೇವರ ಫೋಟೋಗಳನ್ನು ತಂದು ಇಡಲಾಗುತ್ತಿದೆ. ಜಾಹೀರಾತಿನ ಬೃಹತ್ ಫಲಕ ಅಳವಡಿಸಲು ಮತ್ತು ವರ್ಚುಯಲ್ ಗಾರ್ಡನ್ಗಾಗಿ ಮೀಸಲಿಟ್ಟ ಸ್ಥಳದಲ್ಲಿ ದೇವರ ಫೋಟೋಗಳು ಕಾಣಸಿಗುತ್ತಿವೆ.
ಇದಲ್ಲದೇ ಉಣಕಲ್ ಕೆರೆಗೆ ಅಳವಡಿಸಲಾದ ಕಬ್ಬಿಣದ ತಡೆಗೋಡೆಗೂ ದೇವರ ಫೋಟೋಗಳನ್ನು ನೇತು ಹಾಕಲಾಗಿದೆ. ಹೀಗೆ ಇಟ್ಟ ಫೋಟೋಗಳು ಗಾಳಿಯ ರಭಸಕ್ಕೆ ಬಿದ್ದು ಗಾಜು ಒಡೆದು ನೂರಾರು ಚೂರುಗಳಾಗಿ ಬಿದ್ದು ಪಾದಚಾರಿಗಳಿಗೆ ಅಪಾಯಕ್ಕೆ ಎಡೆ ಮಾಡಿಕೊಡುತ್ತಿವೆ.
ಕೋವಿಡ್ ಹಿನ್ನೆಲೆಯಲ್ಲಿ ಉಣಕಲ್ ಕೆರೆಗೆ ಪ್ರವೇಶ ನಿಷೇಧಗೊಂಡ ಹಿನ್ನೆಲೆ, ಬಹುತೇಕ ಚಿತ್ರಪಟಗಳು ಕೆರೆ ಪಾಲಾಗಿಲ್ಲ. ಹೀಗಾಗಿ ಬಿಆರ್ಟಿಎಸ್ನಿಲ್ದಾಣದಲ್ಲಿ ಸ್ಥಾನ ಪಡೆದಿವೆ. ಇಲ್ಲವಾಗಿದ್ದರೆ, ಈ ಫೋಟೋಗಳು ಕೆರೆ ಪಾಲಾಗುತ್ತಿದ್ದವು.
ಕೇವಲ ಮೂರು ತಿಂಗಳಲ್ಲಿ ನೂರಾರು ದೇವರ ಫೋಟೋಗಳು ಕೆರೆಯ ತಡೆಗೋಡೆ ಮತ್ತು ಬಿಆರ್ಟಿಎಸ್ಫ್ಲೈ ಓವರ್ನಲ್ಲಿ ಎಸೆದು ಹೋಗಿದ್ದಾರೆ. ದೇವರ ಫೋಟೋ ಶಿಥಿಲಗೊಂಡಿತ್ತು ಎಂಬ ಕಾರಣಕ್ಕೆ ಎಲ್ಲೆಂದರಲ್ಲಿ ದೇವರ ಫೋಟೋ ಎಸೆಯುವುದು ಎಂತಹ ಭಕ್ತಿ. ನಗರದ ಅಂದಗೆಡಿಸುವವರ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ಧಾರವಾಡ ನೇಚರ್ ರಿಸರ್ಚ್ ಸೆಂಟರ್ ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸಿದೆ.