ಧಾರವಾಡ: ಪ್ರತಿಪಕ್ಷಗಳಿಗೆ ಕೇಸರಿ ಬಣ್ಣ ಎಂದರೆ ಯಾಕೆ ತಲೆ ಕೆಡುತ್ತದೆಯೋ ಗೊತ್ತಿಲ್ಲ. ನಮ್ಮ ಧ್ವಜದಲ್ಲಿ ಕೇಸರಿ ಬಣ್ಣ ಇದೆ. ಕೇಸರಿ ಬಣ್ಣವನ್ನು ಸೂಕ್ತವಾಗಿ ಬಳಸಿಕೊಂಡು ಪೇಂಟ್ ಮಾಡಿದ್ರೆ ಅದಕ್ಕೆ ಹಿಂದುತ್ವದ ಛಾಯೆ ಕೊಡುವುದು ಕೆಟ್ಟದು ಎಂದು ಧಾರವಾಡದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಣ್ಣಗಳಲ್ಲಿ ಎಲ್ಲವೂ ಇರುವುದರಿಂದ ಅದನ್ನು ಸೂಕ್ತವಾಗಿ ಬಳಸಿಕೊಂಡರೆ ಯಾವುದೇ ಸಮಸ್ಯೆ ಇಲ್ಲ. ಕೇಸರಿ ಬಣ್ಣದ ಮೇಲೆ ಇರುವಂತೆ ಸ್ವಾಮಿ ವಿವೇಕಾನಂದರ ಮೇಲೆ ಕೂಡ ಇವರ ಆಕ್ರೋಶ ಇದೆ. ವಿವೇಕಾನಂದರು ಅತ್ಯಂತ ಶ್ರೇಷ್ಠ ವ್ಯಕ್ತಿ. ಜಗತ್ತಿಗೆ ಭಾರತವನ್ನು ಪರಿಚಯಿಸಿದ ವ್ಯಕ್ತಿ ಎಂದು ಹೇಳಿದರು.
ಮಹಾನ್ ವ್ಯಕ್ತಿಗಳ ಪರಿಚಯ ಮಕ್ಕಳಿಗೆ ಆಗಬೇಕು: ಭಾರತ ಎಂದರೆ ಕೆಟ್ಟದ್ದು ಎಂಬ ಆಲೋಚನೆ ಇತ್ತು. ಅಂತಹ ಸ್ಥಿತಿಯಲ್ಲಿ ಭಾರತವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಪ್ರಸ್ತುತಪಡಿಸಿ ದೇಶ ಕಟ್ಟುವ ಕೆಲಸ ಮಾಡಿದ್ರು. ಅವರ ಫೋಟೋ ಇಡುವುದು ಮುಂದಿನ ಪೀಳಿಗೆಯ ಭಾರತ ನಿರ್ಮಾಣಕ್ಕೆ ಸಹಾಯವಾಗಲಿದೆ. ವಿವೇಕಾನಂದ ಅಷ್ಟೇ ಅಲ್ಲ, ದೊಡ್ಡ ಸಾಧನೆ ಮಾಡಿದಂತಹ ಶಿವಾಜಿ ಮಹಾರಾಜ್, ಕೃಷ್ಣದೇವರಾಯ, ಅರವಿಂದರು ಶಾಲಾ ಮಕ್ಕಳಿಗೆ ಪರಿಚಯ ಆಗಬೇಕು. ಸರ್ಕಾರ ಈ ಬಗ್ಗೆ ಹೆಜ್ಜೆ ಇಡುತ್ತಿರುವುದು ಹೆಮ್ಮೆ ಸಂಗತಿ ಎಂದರು.
ಬಸ್ ನಿಲ್ದಾಣದ ಮೇಲೆ ಗುಮ್ಮಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಮೈಸೂರಿನ ಸ್ವರೂಪ ಅಷ್ಟೇ ಅಲ್ಲ. ಬೆಂಗಳೂರಿನಲ್ಲಿ ವಿದ್ಯುತ್ ಇಲಾಖೆಗೆ ಸೇರಿದ ಕಟ್ಟಡ ಇದೆ. ಶಿವಾನಂದ ಸರ್ಕಲ್ನಲ್ಲಿ ಇರುವ ಈ ಕಟ್ಟಡ ನೋಡಿದಾಗ ಗಲ್ಫ್ ರಾಷ್ಟ್ರೀಯ ಸ್ವರೂಪ ತರುವ ಕೆಲಸ ಮಾಡಲಾಗುತ್ತಿದೆ ಎನಿಸುತ್ತದೆ. ಬಸ್ ನಿಲ್ದಾಣವನ್ನು ಬಸ್ ನಿಲ್ದಾಣ ಆಗಿ ಇರಲಿಕ್ಕೆ ಬಿಡಬೇಕು. ಬೇಕಂತಾ ಈ ರೀತಿ ತುರುಕುವ ಕೆಲಸ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಆಡಿದ ಮಾತಿನಿಂದ ನಮ್ಮಲ್ಲಿ ಒಗ್ಗಟ್ಟು: ಚಕ್ರವರ್ತಿ ಸೂಲಿಬೆಲೆ