ಧಾರವಾಡ:ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು (ಶುಕ್ರವಾರ) ಧಾರವಾಡ ಹೈಕೋರ್ಟ್ ಪೀಠವು ತಿರಸ್ಕರಿಸಿತು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ಐದು ವರ್ಷಗಳವರೆಗೆ ಅವಕಾಶ ನೀಡಿ ಠರಾವು ಪಾಸ್ ಮಾಡಿತ್ತು. ಈ ಠರಾವಿಗೆ ತಡೆಯಾಜ್ಞೆ ಕೋರಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಅರ್ಜಿ ಸಲ್ಲಿಸಿತ್ತು.
ಈ ಕುರಿತು ಹು-ಧಾ ಪಾಲಿಕೆ ಮೇಯರ್ ಪರ ವಕೀಲ ಶಿವರಾಜ್ ಬೆಳ್ಳಕ್ಕಿ ಮಾತನಾಡಿ, ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಠರಾವು ಪಾಸ್ ಮಾಡಿತ್ತು. ಈ ಸಂಬಂಧ ಏಕಸದಸ್ಯ ಪೀಠದ ಮುಂದೆ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಠರಾವಿಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ಹೇಳಿದರು. ಇದು ಪ್ರಾರ್ಥನೆ ಮಾಡಲು ಮಾತ್ರ ಇರುವ ಮೈದಾನ. ಇಲ್ಲಿ ಬೇರೆಯವರೆಗೆ ಕೊಡಬಾರದು ಎಂದು ವಾದ ಮಾಡಿದ್ದರು. ಆದರೆ, ಈ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಸದ್ಯಕ್ಕೆ ಗಣೇಶ ಪ್ರತಿಷ್ಠಾಪನೆ ಮಾಡಲು ತೊಂದರೆ ಇಲ್ಲ ಎಂದರು.
ಹಿರಿಯ ವಕೀಲ ಪ್ರಭುಲಿಂಗ ನಾವಲಗಿ ಪಾಲಿಕೆ ಮೇಯರ್ ಪರ ವಾದ ಮಂಡಿಸಿದ್ದರು. ಇಲ್ಲಿ ರಂಜಾನ್ ಮತ್ತು ಬಕ್ರೀದ್ ಸಮಯದಲ್ಲಿ ಪ್ರಾರ್ಥನೆ ಮಾತ್ರ ಅವಕಾಶ ಇದೆ ಎಂದು ಪ್ರತಿವಾದ ಮಾಡಲಾಗಿತ್ತು ಎಂದು ಬೆಳ್ಳಕ್ಕಿ ವಿವರಿಸಿದರು.