ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ ಪ್ರತಿಕ್ರಿಯೆ ಹುಬ್ಬಳ್ಳಿ: ನಗರದ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಕಳೆದ ವರ್ಷದಂತೆ ಈ ವರ್ಷವೂ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ನಗರದ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿಯು ನಗರದ ಪಾಲಿಕೆ ಆಯುಕ್ತರಿಗೆ ಇಂದು ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಸಮಿತಿಯ ಸಂಚಾಲಕ ಹನುಮಂತಸಾ ನಿರಂಜನ, ಇಂದು ಗಜಾನನ ಉತ್ಸವ ಸಮಿತಿಯಿಂದ ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಲು ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಕಳೆದ ಬಾರಿ ನಮ್ಮ ಹೋರಾಟದ ಫಲವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ದೊರೆತಿತ್ತು. ಈ ಬಾರಿ 15 ದಿನಗಳವರೆಗೆ ಅವಕಾಶ ಕಲ್ಪಿಸಬೇಕು. 11 ದಿನಗಳ ಕಾಲ ಹಬ್ಬವನ್ನು ಆಚರಿಸಲು ಸಮಿತಿ ತೀರ್ಮಾನಿಸಿದೆ ಎಂದು ಹೇಳಿದರು.
ರಾಣಿ ಚೆನ್ನಮ್ಮ ಮೈದಾನ ಹು-ಧಾ ಪಾಲಿಕೆಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು. ಮಹಾನಗರ ಪಾಲಿಕೆ ನಮಗೆ ಹದಿನೈದು ದಿನಗಳಿಗೆ ಮುಂಚಿತವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಗಣೇಶೋತ್ಸವ ಸಂಬಂಧ ಸಾಂಸ್ಕೃತಿಕ ಮಂಟಪ ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮಂಟಪಗಳಿಗೆ ನಮಗೆ ಅವಕಾಶ ನೀಡಬೇಕು. ಪಾಲಿಕೆಯ ಷರತ್ತಿನ ಅನ್ವಯವಾಗಿ ನಾವು ಗಣೇಶೋತ್ಸವ ಆಚರಣೆಗೆ ಬದ್ಧ. ಮೂರು ಸಾವಿರ ಮಠದ ಸ್ವಾಮೀಜಿ ಹಾಗೂ ಉಳಿದ ಗಣೇಶ ಸಮಿತಿ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿ ಗಣೇಶೋತ್ಸವದ ಕುರಿತು ಪೂರ್ವಭಾವಿಯಾಗಿ ಚರ್ಚಿಸಲಾಗುವುದು ಎಂದು ಹೇಳಿದರು.
ಸಮಿತಿ ಸದಸ್ಯೆ ರಾಜಶ್ರೀ ಜಡಿ ಮಾತನಾಡಿ, ಇಲ್ಲಿನ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ಮಹಾನಗರ ಪಾಲಿಕೆಗೆ ಒಂದು ಮನವಿ ಕೊಟ್ಟಿದ್ದೇವೆ. ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಿಸಲು ನಿರ್ಧರಿಸಿದ್ದೇವೆ. 11 ದಿನಗಳ ಕಾಲ ಗಣೇಶೋತ್ಸವ ನಡೆಯಲಿದ್ದು, ಐದು ದಿನಗಳವರೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಕಳೆದ ವರ್ಷದಂತೆ ಈ ವರ್ಷವೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಈ ಸಂಬಂಧ ಈಗಾಗಲೇ ಮೂರಕ್ಕೂ ಹೆಚ್ಚು ಸಂಘಟನೆಗಳು ಮನವಿ ಸಲ್ಲಿಸಿವೆ. ಇನ್ನೂ ಸಾಕಷ್ಟು ಸಮಯ ಇದೆ. ಹೀಗಾಗಿ ಸದ್ಯಕ್ಕೆ ಯಾವ ತೀರ್ಮಾನವನ್ನು ಕೈಗೊಂಡಿಲ್ಲ. ಎಷ್ಟು ದಿನ ಅವಕಾಶ ನೀಡಬೇಕು ಎಂಬೆಲ್ಲ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ :ಧಾರವಾಡ: ಶಾಲಾ ಮಕ್ಕಳಿಂದ ನಾಗರ ಪಂಚಮಿ ಆಚರಣೆ.. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು