ಒಂದೇ ದಿನ ಬಂದ ಗಣೇಶ ನಿಮಜ್ಜನ- ಈದ್ ಮಿಲಾದ್: ಮೆರವಣಿಗೆ ಮುಂದೂಡಿದ ಮುಸ್ಲಿಂ ಮುಖಂಡರು ಹುಬ್ಬಳ್ಳಿ:ಗೌರಿ, ಗಣೇಶ ಹಿಂದೂಗಳಿಗೆ ಬಹುದೊಡ್ಡ ಹಬ್ಬವಾದರೆ, ಮುಸ್ಲಿಮರಿಗೆ ಈದ್ ಮಿಲಾದ್ ಪ್ರಮುಖ ಹಬ್ಬ. ಆದರೆ ಈ ಬಾರಿ ಸಾರ್ವಜನಿಕ ಗಣೇಶ ನಿಮಜ್ಜನ ದಿನವೇ ಈದ್ ಮಿಲಾದ್ ಕೂಡ ಬಂದಿದ್ದು, ಶಾಂತಿ, ಸೌಹಾರ್ದತೆ ಕಾಪಾಡಲು ಈದ್ ಮಿಲಾದ್ ಮೆರವಣಿಗೆಯನ್ನು ಮಾರನೇ ದಿನ ಆಚರಿಸಲು ಮುಸ್ಲಿಂ ಮುಖಂಡರು ತೀರ್ಮಾನಿಸಿದ್ದಾರೆ.
ಈ ವರ್ಷ ಗಣಪತಿ ನಿಮಜ್ಜನ ಮೆರವಣಿಗೆಗಳು ಹಾಗೂ ಈದ್ ಮಿಲಾದ್ ಮೆರವಣಿಗೆಗಳು ಸೆಪ್ಟೆಂಬರ್ 28ರಂದು ಬಂದಿದೆ. ಎರಡೂ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುವುದರಿಂದ ಶಾಂತಿ ಸುವ್ಯವಸ್ಥೆಗೆ ತೊಡಕಾಗಬಹುದು ಎಂದು ಅಂಜುಮನ್ ಸಂಸ್ಥೆ ಪದಾಧಿಕಾರಿಗಳು, ಮುತುವಲ್ಲಿಗಳು, ಧರ್ಮ ಗುರುಗಳು, ಸಮಾಜದ ಮುಖಂಡರು ಹಾಗೂ ಯುವಕರು ಶಾಂತಿ ಸಭೆ ನಡೆಸಿ, ಒಂದು ದಿನ ಬಿಟ್ಟು ಮೆರವಣಿಗೆ ಮಾಡುವ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ಯಾವಾಗ ನಡೆಸಬೇಕು ಎನ್ನುವ ಏಕೈಕ ವಿಷಯದ ಕುರಿತು ಮೂರು ತಾಸು ಸಭೆ ನಡೆಸಿದ ಎಲ್ಲ ಮುಖಂಡರು, ಅಧಿಕಾರಿಗಳು ಎಲ್ಲರ ಅಭಿಪ್ರಾಯ ಕೇಳಿ, ಸೋಲು, ಗೆಲುವು ಸಾಮಾನ್ಯ. ಸೋತು ಗೆಲ್ಲಬೇಕು. ನಮಗೆ ಶಾಂತಿ, ಸೌಹಾರ್ದತೆ ಮುಖ್ಯ. ಈ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ನಿಮಜ್ಜನ ಉತ್ಸವಕ್ಕೆ ತೊಂದರೆಯಾಗದಂತೆ, ಒಂದು ದಿನ ಬಿಟ್ಟು ಈದ್ ಮಿಲಾದ್ ಮೆರವಣಿಗೆ ಮಾಡಲು ನಿರ್ಧರಿಸಿದ್ದೇವೆ. ಇದು ನಮ್ಮ ಸಮುದಾಯದ ಬಹುದೊಡ್ಡ ತ್ಯಾಗ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಯೂಸೂಫ್ ಸವಣೂರು ಹಾಗೂ ಮುಸ್ಲಿಂ ಮುಖಂಡ ಅಲ್ತಾಪ್ ಹಳ್ಳೂರು ಹೇಳಿದರು.
ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಗಣಪತಿ ನಿಮಜ್ಜನ ಮೆರವಣಿಗೆಗಳು ಸೆಪ್ಟೆಂಬರ್ 28ರಂದು ನಡೆಯುವ ಹಿನ್ನೆಲೆಯಲ್ಲಿ, ಸಮಾಜದ ಮುಖಂಡರೆಲ್ಲ ಶಾಂತಿ ಸಭೆ ಮಾಡಿ ಈದ್ ಮೆರವಣಿಗೆಗಳನ್ನು ಸೆಪ್ಟೆಂಬರ್ 29 ರಂದು ನಡೆಸಲು ಮುಸ್ಲಿಂ ಸಮುದಾಯ ತೀರ್ಮಾನಿಸಿದೆ. ಸೆಪ್ಟೆಂಬರ್ 28 ರಂದು ಈದ್ ಮಿಲಾದ್ ಹಬ್ಬ ಮತ್ತು ಇತರ ಕಾರ್ಯಕ್ರಮಗಳನ್ನು ಮನೆಯಲ್ಲಿಯೇ ಆಚರಿಸುತ್ತಿದ್ದು, ಮೆರವಣಿಗೆಗಳು ಮಾತ್ರ 29 ರಂದು ನಡೆಯಲಿದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಹುಬ್ಬಳ್ಳಿ-ಧಾರಾವಾಡ ಪೊಲೀಸ್ ಕಮಿಷನರೇಟ್ ಮುಂದಾಗಿದೆ.
ಅಂಜುಮನ ಸಂಸ್ಥೆ ಅಧ್ಯಕ್ಷ ಯೂಸೂಫ್ ಸವಣೂರು ಈ ಬಗ್ಗೆ ಮಾತನಾಡಿ, "ಎಲ್ಲರೂ ಬಹುಮತದೊಂದಿಗೆ ಈ ಬದಲಾವಣೆಗೆ ಒಪ್ಪಿದ ಕಾರಣ ನಾವು, ಈ ಘೋಷಣೆ ಮಾಡಿದ್ದೇವೆ. ಯಾವುದೇ ಗಲಾಟೆ ಬೇಡ, ಎರಡೂ ಹಬ್ಬಗಳು ಶಾಂತಿಯುತವಾಗಿ ನಡೆಯಲಿ ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕೀಯ ಮಾಡಬೇಡಿ. ಈದ್ಗಾ ಮೈದಾನ ಧಾರ್ಮಿಕ ಸ್ಥಳ, ಒಬ್ಬರು ಮಾಡೋವಾಗ, ಇನ್ನೊಬ್ಬರು ಹೋಗಿ ಪೂಜೆ ಮಾಡುವುದು, ಗಲಾಟೆ ಮಾಡಬಾರದು. ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ವಿನಯ್ ಕುಲಕರ್ಣಿ, ನಮ್ಮ ಅಂಜುಮನ್ ಸಂಸ್ಥೆ ಎಲ್ಲರೂ ಸೇರಿ, ಮುಖ್ಯಮಂತ್ರಿ ಬಳಿ ಒಂದು ನಿಯೋಗ ಹೋಗೋಣ. ಇದೆಲ್ಲಕ್ಕೂ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳೋಣ" ಎಂದು ಹೇಳಿದರು.
ಸಾಮಾಜಿಕ ಸಾಮರಸ್ಯಕ್ಕಾಗಿ ಮುಸ್ಲಿಂ ಸಮುದಾಯ ತೆಗೆದುಕೊಂಡ ನಿರ್ಧಾರಕ್ಕೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಗಣೇಶೋತ್ಸವ ಮೆರವಣಿಗೆಗೆ ಈದ್ ಮಿಲಾದ್ ಮುಂದೂಡಿದ ಮುಸ್ಲಿಮರು