ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆರ್ಥಿಕ ಮುಗಟ್ಟು ಎದುರಿಸುತ್ತಿದೆ. ಒಂದು ಕಡೆ ಸಾರಿಗೆ ನೌಕರರ ಪ್ರತಿಭಟನೆ, ಮತ್ತೊಂದೆಡೆ ಕೊರೊನಾ ಲಾಕ್‌ಡೌನ್ ಎಫೆಕ್ಟ್. ಇದೆಲ್ಲದರ ನಡುವೆ ಡೀಸೆಲ್ ಬೆಲೆ ಹೆಚ್ಚಳವು ಸಾರಿಗೆ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಿದೆ.
ಮೊದಲೇ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳ ಮೇಲೆ ಡೀಸೆಲ್ ದರ ಗಾಯದ ಮೇಲೆ ಬರೆ ಎಳೆದಿದೆ. ಸಾರಿಗೆ ಸಂಸ್ಥೆಗಳು ತೈಲ ಕಂಪನಿಗಳಿಂದ ಸಗಟು ಡೀಸೆಲ್ ಖರೀದಿಸುತ್ತವೆ. 15 ದಿನಗಳಿಗೊಮ್ಮೆ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.
ಪ್ರತಿ ಲೀಟರ್ಗೆ ಇಂತಿಷ್ಟು ದರದಲ್ಲಿ ಖರೀದಿ ಮಾಡಲಾಗುತ್ತಿದೆ. ಪ್ರತಿ ಎರಡು ವಾರಗಳಿಗೊಮ್ಮೆ ಹಣವನ್ನು ಸಂದಾಯ ಮಾಡುತ್ತವೆ. ಈಗ ಅದೇ ಡೀಸೆಲ್ ದರ ಹೆಚ್ಚಳ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಆದಾಯಕ್ಕೆ ಮತ್ತೊಂದು ಪೆಟ್ಟು ಕೊಟ್ಟಿದೆ.
ಲಾಕ್ಡೌನ್ಗಿಂತ ಮೊದಲು ವಾಯವ್ಯ ಕರ್ನಾಟಕ ಸಾರಿಗೆ ಬಸ್ಗಳು ಪ್ರತಿ ದಿನ 17 ಲಕ್ಷ ಕಿ.ಮೀ. ಓಡಾಡುತ್ತಿದ್ದವು. ನಿತ್ಯ 22 ಲಕ್ಷ ಪ್ರಯಾಣಿಕರು ಇದರ ಸೌಲಭ್ಯ ಪಡೆಯುತ್ತಿದ್ದರು. ಆದ್ರೆ, ಲಾಕ್‌ಡೌನ್ ನಂತರ ಪ್ರತಿ ದಿನ 14 ಲಕ್ಷ ಕಿ.ಮೀ. ಓಡಾಟ ನಡೆಸುವ ಬಸ್ಗಳಲ್ಲಿ 12-14 ಲಕ್ಷ ಜನ ಮಾತ್ರ ಪ್ರಯಾಣಿಸುತ್ತಿದ್ದಾರೆ. ಲಾಕ್‌ಡೌನ್ ಪೂರ್ವದಲ್ಲಿ 5 ಕೋಟಿ ಇದ್ದ ಆದಾಯವೀಗ 3.5 ಕೋಟಿಗೆ ಇಳಿದಿದೆ. ಇದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಷ್ಟಕ್ಕೆ ಕಾರಣವಾಗಿದೆ.