ಹುಬ್ಬಳ್ಳಿ: ಮಹಾಮಾರಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದ ಜನರಿಗೀಗ ಏರಿಕೆ ಕಂಡಿರುವ ಇಂಧನ ಬೆಲೆಯು ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ ಸೃಷ್ಟಿಸಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆ ಹೊಡೆತಕ್ಕೆ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಇದ್ರಿಂದ ಫುಡ್ ಡೆಲಿವರಿ ಬಾಯ್ಸ್ ಕೂಡ ಹೊರತಲ್ಲ. ತಮ್ಮ ಸ್ವಂತ ಬೈಕ್ - ಸ್ಕೂಟರ್ಗಳಲ್ಲಿ ಮನೆ ಮನೆಗೆ ತೆರಳಿ ಸೇವೆ ಒದಗಿಸುತ್ತಿದ್ದ ಫುಡ್ ಡೆಲಿವರಿ ಬಾಯ್ಸ್ ಕೂಡ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಗರ ಪ್ರದೇಶಗಳಲ್ಲಿ ಫುಡ್ ಡೆಲಿವರಿ ಬಾಯ್ಸ್ಗಳ ಪಾತ್ರ ಪ್ರಮುಖವಾಗಿದೆ. ಮನೆ, ಆಫಿಸ್ ಸೇರಿದಂತೆ ಯಾವುದೇ ಸ್ಥಳದಲ್ಲಿ ಕುಳಿತು ಫುಡ್ ಹಾಗೂ ಸ್ನ್ಯಾಕ್ಸ್ಆರ್ಡರ್ ಮಾಡುವ ಗ್ರಾಹಕರಿಗೆ ಆಹಾರ ತಲುಪಿಸುವ ಕೆಲಸವನ್ನು ಮಾಡುವ ಈ ಫುಡ್ ಡೆಲಿವರಿ ಬಾಯ್ಸ್ ಇದೀಗ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ.
ಜೊಮ್ಯಾಟೋ, ಸ್ವಿಗ್ಗಿ ಸೇರಿದಂತೆ ಇತರೆ ಸಂಸ್ಥೆಗಳ ಆಹಾರ ವಿತರಣೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಈ ವ್ಯವಹಾರವು ಪ್ರತಿ ನಗರದ ಸಾವಿರಾರು ಯುವಕರಿಗೆ ಪೂರ್ಣ ಸಮಯ ಮತ್ತು ಅರೆಕಾಲಿಕ ಕೆಲಸ ಒದಗಿಸಿತ್ತು. ಆದ್ರೀಗ ಎಗ್ಗಿಲ್ಲದೇ ಏರಿಕೆ ಕಂಡಿರುವ ಇಂಧನ ಬೆಲೆ ಸುಳಿಗೆ ಈ ಡೆಲಿವರಿ ಬಾಯ್ಸ್ ಸಿಲುಕಿದ್ದಾರೆ. ಹೌದು, ಆರ್ಡರ್ ಬಂದ ಮನೆಗಳಿಗೆ ತಮ್ಮ ಸ್ವಂತ ಬೈಕ್-ಸ್ಕೂಟರ್ಗಳಲ್ಲಿ ಈ ಡೆಲಿವರಿ ಬಾಯ್ಸ್ ಫುಡ್ ಡೆಲಿವರಿ ಮಾಡುತ್ತಿದ್ದರು. ಆದ್ರೀಗ ಇಂಧನ ಬೆಲೆ ಏರಿಕೆಯಿಂದ ವ್ಯವಹಾರ ನಡೆಸುವುದು ಕಷ್ಟವಾಗಿದೆ.