ಕರ್ನಾಟಕ

karnataka

By ETV Bharat Karnataka Team

Published : Sep 10, 2023, 9:53 PM IST

ETV Bharat / state

ಧಾರವಾಡ ಕೃಷಿಮೇಳ: ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

ಧಾರವಾಡದ ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ ಫಲಪುಷ್ಪ ಪ್ರದರ್ಶನಕ್ಕೆ ಸಾವಿರಾರು ಜನರು ಆಗಮಿಸಿ ಬಗೆಬಗೆಯ ಹೂವುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

fruit-and-flower-show-in-dharwad-agricultural-fair
ಧಾರವಾಡ ಕೃಷಿಮೇಳ: ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

ಧಾರವಾಡ ಕೃಷಿಮೇಳ: ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

ಧಾರವಾಡ: ಉತ್ತರ ಕರ್ನಾಟಕ ಭಾಗದ ರೈತರ ಜಾತ್ರೆ ಎಂದು ಕರೆಸಿಕೊಳ್ಳುವ ಕೃಷಿಮೇಳದ ಎರಡನೇ ದಿನವಾದ ಇಂದು ಫಲಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನವನ್ನು ಸಾರ್ವಜನಿಕರ ಗಮನ ಸೆಳೆಯಿತು. ವಿವಿಧ ಬಗೆಯ ಹೂವುಗಳನ್ನು ಒಂದೇ ಕಡೆ ಕಣ್ತುಂಬಿಕೊಂಡ ಜನರು ಸಂತಸಪಟ್ಟರು. ಧಾರವಾಡ ಕೃಷಿ ವಿಶ್ವವಿದ್ಯಾಲಯ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ ಫಲಪುಷ್ಪ ಪ್ರದರ್ಶನದಲ್ಲಿ ಸಾವಿರಾರು ಜನರು ಆಗಮಿಸಿ ತಮ್ಮಗಿಷ್ಟವಾದ ಹೂವುಗಳ ಕಲಾಕೃತಿಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಾಲ್ಕು ದಿನಗಳ ಕಾಲ ಕೃಷಿ ಮೇಳದ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಫಲಪುಷ್ಪ ಪ್ರದರ್ಶನದಲ್ಲಿ ಜರ್ಬೆರಾ, ಗುಲಾಬಿ, ಸೇವಂತಿಗೆ, ಅಲಂಕಾರಿಕ ಹೂವಿನ ಪ್ರದರ್ಶನ ಮಾಡಲಾಗುತ್ತಿದೆ. ನೂರಕ್ಕೂ ಹೆಚ್ಚು ಬಗೆಯ ಹೂವಿನ ಸಸಿಗಳು ಗಮನ ಸೆಳೆಯುತ್ತಿವೆ. ಇನ್ನು ಕೃಷಿ ವಿವಿಯನ್ನೇ ಹೋಲುವ ಕೃತಕ ವಿವಿಯನ್ನ ಕೂಡಾ ಹೂವಿನಿಂದ ತಯಾರಿಸಲಾಗಿದೆ. ಇದಲ್ಲದೇ ಚಂದ್ರಯಾನ 3 ಬಿಂಬಿಸುವ ಕೃತಕ ಸ್ಪೇಸ್ ಕೂಡ ಹೂವಿನಲ್ಲಿ ಮೂಡಿಬಂದಿವೆ.

ವಿದ್ಯಾರ್ಥಿನಿ ಹರ್ಷಿತಾ ಮಾತನಾಡಿ, ನಾವು ಪ್ರತಿ ವರ್ಷ ಕೃಷಿ ಮೇಳಕ್ಕೆ ಬರುತ್ತೇವೆ. ಅದರಲೂ ಫಲಪುಷ್ಪ ಪ್ರದರ್ಶನ ವರ್ಷದಿಂದ ವರ್ಷಕ್ಕೆ ಭಿನ್ನವಾಗಿರುತ್ತದೆ. ವಿವಿಧ ಬಗೆಯ ಹೂವುಗಳನ್ನು ಫೋಟೋದಲ್ಲಿ ಮಾತ್ರ ನೋಡಿರುತ್ತೇವೆ. ಈಗ ಇಲ್ಲಿಗೆ ಬಂದು ಬಗೆಬಗೆಯ ಹೂವುಗಳನ್ನು ಕಣ್ತುಂಬಿಕೊಳ್ಳಬಹುದು. ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿದ್ದಕ್ಕೆ ತುಂಬಾ ಖುಷಿಯಾಗಿದೆ. ಪ್ರತಿ ವರ್ಷ ಸ್ನೇಹಿತೆಯರೆಲ್ಲರೂ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುತ್ತೇವೆ ಎಂದರು. ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸಿದ್ದಮ್ಮ ಮಾತನಾಡಿ, ಫಲಪುಷ್ಪ ಪ್ರದರ್ಶನದಲ್ಲಿ ಬೇರೆ ದೇಶಗಳಲ್ಲಿ ಬೆಳೆಯುವ ಹೂವುಗಳು ಮತ್ತು ಬಗೆಬಗೆಯ ಹೂವುಗಳನ್ನು ಇಲ್ಲಿ ನೋಡಿದ್ದಕ್ಕೆ ತುಂಬಾ ಸಂತೋಷವಾಯಿತು ಎಂದರು.

ನಿನ್ನೆ(ಶನಿವಾರ) ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಹಾಗೂ ವಿಸ್ಮಯಕಾರಿ ಕೀಟ ಪ್ರಪಂಚ ಸೇರಿದಂತೆ ಹಲವು ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಬಳಿಕ ಹಲವು ಬಗೆಯ ಸಸ್ಯಗಳನ್ನು ಹಾಗೂ ವಿವಿಧ ಹೂವಿನ ಕಲಾಕೃತಿಗಳ ಸಿಎಂ ಸಿದ್ದರಾಮಯ್ಯ ಕಣ್ತುಂಬಿಕೊಂಡರು. ಈ ವೇಳೆ ಸಿಎಂಗೆ ಸಚಿವ ಸಂತೋಷ್ ಲಾಡ್ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಸಾಥ್ ನೀಡಿದ್ದರು.

ಈ ಬಾರಿ ಸುಸ್ಥಿರ ಕೃಷಿಗೆ ಹಾಗೂ ಸಮೃದ್ಧ ಆರೋಗ್ಯಕ್ಕಾಗಿ ಸಿರಿಧಾನ್ಯಗಳು ಮತ್ತು ತೋಟಗಾರಿಕೆ ಬೆಳೆಗಳು ಎಂಬ ಘೋಷ್ಯವಾಕ್ಯದೊಂದಿಗೆ ಕೃಷಿಮೇಳ ನಡೆಯುತ್ತಿದೆ. ನಾಲ್ಕು ದಿನಗಳ ಮೇಳಕ್ಕೆ 10 ಲಕ್ಷಕ್ಕೂ ಹೆಚ್ಚು ಜನ ಬರುವ ನಿರೀಕ್ಷೆಯಿದೆ‌. ಪ್ರದಶರ್ನಕ್ಕಾಗಿ 191 ಹೈಟೆಕ್ ಮಳಿಗೆ, 351 ಸಾಮಾನ್ಯ ಮಳಿಗೆ, 24 ಯಂತ್ರೋಪಕರಣ, 50 ಜಾನುವಾರು ಪ್ರದರ್ಶನ ಮಳಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಇದನ್ನೂ ಓದಿ:ಹಲಸು ಬೆಳೆಸಿ ಹಣ್ಣು ತಿನ್ನಲು ಹೆಚ್ಚು ಕಾಯಬೇಕಿಲ್ಲ; ಒಂದೆರಡು ವರ್ಷಕ್ಕೆಲ್ಲ ಫಲಕೊಡಲಿವೆ ಈ ಕಸಿಗಿಡಗಳು

ABOUT THE AUTHOR

...view details