ಹುಬ್ಬಳ್ಳಿ: ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಡಗರದಲ್ಲಿದೆ. ಈ ಸಂದರ್ಭದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ಮಡಿದವರನ್ನು ಸ್ಮರಿಸುವುದು ಪ್ರತೀ ಭಾರತೀಯನ ಜವಾಬ್ದಾರಿಯೂ ಹೌದು.
ಬಾಲಹೋರಾಟಗಾರ ನಾರಾಯಣ ಮಹಾದೇವ ದೋನಿ ಸ್ವಾತಂತ್ರ್ಯ ಚಳವಳಿಯಲ್ಲಿ ಲಕ್ಷಾಂತರ ಜನರು ಹೋರಾಡಿದರು. ಅದೆಷ್ಟೋ ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಇಂಥ ಲಕ್ಷಾಂತರ ಹೋರಾಟಗಾರರಲ್ಲಿ ಬಾಲ ಹೋರಾಟಗಾರರೂ ಇದ್ದಾರೆ. ಇವರಲ್ಲಿ ಹುಬ್ಬಳಿಯ ನಾರಾಯಣ ಮಹಾದೇವ ದೋನಿ ಕೂಡ ಒಬ್ಬರು. ಇಲ್ಲಿರುವ ಈ ಬಾಲ ಹೋರಾಟಗಾರನ ಪುತ್ಥಳಿ ವ್ಯಾಪಾರ ವಸ್ತುಗಳ ಮಧ್ಯೆ ಕಾಣದಂತಾಗಿದೆ. ಸರ್ ಸಿದ್ದಪ್ಪ ಕಂಬಳಿ ಮಾರ್ಗ (ಲ್ಯಾಮಿಂಗ್ಟನ್ ರೋಡ್)ದಲ್ಲಿ ನಿರ್ಮಿಸಲಾದ ವೀರ ಸ್ಮಾರಕವು ಮಹಾನಗರ ಪಾಲಿಕೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ.
ನಮ್ಮೂರ ಹೆಮ್ಮೆಯ ಪ್ರತೀಕ ಹುತಾತ್ಮ ನಾರಾಯಣ ದೋನಿ ನಾರಾಯಣ ಮಹಾದೇವ ದೋನಿ ಯಾರು?:ನಾರಾಯಣ ಮಹಾದೇವ ದೋನಿ ಬ್ರಿಟೀಷರ ಗುಂಡೇಟಿಗೆ ಬಲಿಯಾದಾಗ ಅವರಿಗೆ ಕೇವಲ 14 ವರ್ಷ ವಯಸ್ಸು. ಇವರು ಹುಬ್ಬಳ್ಳಿ ನಿವಾಸಿ. ಇವರ ಪ್ರಾಣಾರ್ಪಣೆ ಸ್ಮರಣೆಗೋಸ್ಕರ ನಗರದ ಕಲಾದಗಿ ಓಣಿಯ ಬ್ರಾಡ್‌ವೇನಲ್ಲಿ 2000ರಲ್ಲಿ ಪ್ರತಿಮೆ ಸ್ಥಾಪಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಧಾನ ಕಚೇರಿಯ ಅನತಿ ದೂರದಲ್ಲಿರುವ ಈ ವೀರ ಸ್ಮಾರಕ ಈಗ ನಿರ್ಲಕ್ಷ್ಯಕ್ಕೊಳಗಾಗಿದೆ. ಸ್ಮಾರಕದ ಸುತ್ತಲೂ ಅಳವಡಿಸಿರುವ ಕಬ್ಬಿಣದ ಗ್ರಿಲ್‌ಗಳಲ್ಲಿ ಒಂದು ಭಾಗ ಕಿತ್ತು ಹೋಗಿದೆ. ಹಲವು ವರ್ಷಗಳಿಂದ ಹೀಗೆಯೇ ಇದ್ದು, ಪಾಲಿಕೆಯ ಅಧಿಕಾರಿಗಳು ನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದರೂ ಜಾಣಮೌನ ವಹಿಸಿದ್ದಾರೆ. ಸ್ಮಾರಕದ ಪರಿಸರದ ಸ್ವಚ್ಛತೆಯನ್ನೂ ಕಾಪಾಡಿಲ್ಲ.
ಇದನ್ನೂ ಓದಿ:36 ಸಾವಿರ ಕಿ.ಮೀ ಸೈಕಲ್ ಜಾಥ.. ಮಾಜಿ ಯೋಧನ ಜೊತೆ ಹರ್ ಘರ್ ತಿರಂಗಾ ಆಚರಿಸಿದ ಮಲೆನಾಡಿಗರು