ಹುಬ್ಬಳ್ಳಿ:ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ವಿದೇಶಿ ಮೂಲದ ಕಳ್ಳರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧೆಡೆ ಇವರು ಹಣ ದೋಚುತ್ತಿದ್ದರು. ಬೆಳಗಾವಿಯಿಂದ ಹುಬ್ಬಳ್ಳಿ ಮೂಲಕ ದೆಹಲಿ ಪಾಸಿಂಗ್ ಇರುವ ಕಾರಿನಲ್ಲಿ ಬೇರೆಡೆ ತೆರಳುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ.
ಕಳೆದ ಹಲವು ದಿನಗಳಿಂದ ಬೆಳಗಾವಿಯಲ್ಲಿ ಕಳ್ಳತನ ಮಾಡುತ್ತಿದ್ದರು. ಬೆಳಗಾವಿ ಪೊಲೀಸರ ಮಾಹಿತಿ ಮೇರೆಗೆ ಹುಬ್ಬಳ್ಳಿಯಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆತಂದು, ಬಳಿಕ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ.
ದರೋಡೆ- ದುಷ್ಕರ್ಮಿಗಳೊಂದಿಗೆ ಗುದ್ದಾಡಿ ಗೆದ್ದ ಮಾಲೀಕ:ಇಬ್ಬರು ಮುಸುಕುಧಾರಿಗಳು ಪಿಸ್ತೂಲ್ ತೋರಿಸಿ ಬಂಗಾರದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಗಾವಿಯ ಶಾಹುನಗರದಲ್ಲಿ ಸೋಮವಾರ (ಅಕ್ಟೋಬರ್ 16-2023) ಬೆಳಿಗ್ಗೆ ನಡೆದಿತ್ತು. ಪ್ರಶಾಂತ ಹೊನರಾವ್ ಎಂಬವರಿಗೆ ಸೇರಿದ ಸಂತೋಷಿ ಜ್ಯುವೆಲ್ಲರಿಯಲ್ಲಿ ಘಟನೆ ನಡೆದಿದೆ. ಎಂದಿನಂತೆ ಬಾಗಿಲು ತೆರೆದಿದ್ದ ಪ್ರಶಾಂತ, ಅಂಗಡಿಯಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅಂಗಡಿಗೆ ನುಗ್ಗಿದ್ದಾರೆ. ಒಬ್ಬ ಪಿಸ್ತೂಲಿನಿಂದ ಹೆದರಿಸಿ ಚಿನ್ನಾಭರಣ ನೀಡುವಂತೆ ಒತ್ತಾಯಿಸಿದ್ದ. ಪ್ರಶಾಂತ ಪ್ರತಿರೋಧ ತೋರುತ್ತಿದ್ದಂತೆ ದರೋಡೆಕೋರರು ಹಲ್ಲೆಗೆ ಮುಂದಾಗಿದ್ದರು. ಇದಕ್ಕೆ ಪ್ರತಿರೋಧ ಒಡ್ಡಿದ್ದರಿಂದ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದರು.
ಗಾಯಗೊಂಡ ಪ್ರಶಾಂತ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಡಿಸಿಪಿ ರೋಹನ ಜಗದೀಶ, ಡಿಸಿಪಿ ಪಿ.ವಿ.ಸ್ನೇಹಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನ್ಯಾಯ ವಿಜ್ಞಾನ ಪ್ರಯೋಗಾಲಯ, ಶ್ವಾನ ದಳದ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೊಂಡಿದ್ದರು.
ಇಬ್ಬರು ಕುಖ್ಯಾತ ಸರಗಳ್ಳರ ಬಂಧನ:ಕಲಬುರಗಿ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ 15 ಸರಗಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ (ಅಕ್ಟೋಬರ್ 16-2023) ಯಶಸ್ವಿಯಾಗಿದ್ದರು. ಇಬ್ಬರು ಕುಖ್ಯಾತ ಸರಗಳ್ಳರನ್ನು ಬಂಧಿಸಲಾಗಿತ್ತು. ಆರೋಪಿಗಳಿಂದ 298 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿತ್ತು. ಕಲಬುರಗಿ ಮೂಲದ ಶೇಖ್ ಅಜರುದ್ದೀನ್ (26) ಹಾಗೂ ಮುಹಮ್ಮದ್ ತೌಸೀಫ್ (23) ಬಂಧಿತರು.
ಈ ಇಬ್ಬರು ಆರೋಪಿಗಳು ಕಳೆದೊಂದು ವರ್ಷದಿಂದ ನಗರದ ವಿವಿಧೆಡೆ ಕಳ್ಳತನ ಮಾಡಿ ಪರಾರಿಯಾಗಿದ್ದರು. ಅಶೋಕ್ ನಗರ, ಸ್ಟೇಷನ್ ಬಜಾರ್, ಆರ್.ಜಿ.ನಗರ, ಎಂ.ಬಿ.ನಗರ, ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಮತ್ತು ಬ್ರಹ್ಮಪುರ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದು ಮಹಿಳೆಯರ ಕೊರಳಿಗೆ ಕೈಹಾಕಿ ಚಿನ್ನದ ಸರ ಕದ್ದು ಪರಾರಿಯಾಗಿದ್ದರು. ನಿರಾಯಾಸವಾಗಿ ಸರಗಳ್ಳತನ ಮಾಡುತ್ತಾ ಒಂದು ವರ್ಷದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಓಡಾಡುತ್ತಿದ್ದ ಇವರ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಿಕೊಂಡು ಫೀಲ್ಡ್ಗಿಳಿದ ಪೊಲೀಸರು, ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.
ಇದನ್ನೂ ಓದಿ:ಕಲಬುರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಕುಖ್ಯಾತ ಸರಗಳ್ಳರ ಬಂಧನ