ಹುಬ್ಬಳ್ಳಿ: ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಿರುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದರ ಹಿಂದೆ ಬಿಜೆಪಿ ಕೈವಾಡ ಇರೋದು ಸ್ಪಷ್ಟವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಅವರು ಕಾನೂನಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ರಾಜೀನಾಮೆ ಪತ್ರ ಯಾವುದು ಸರಿ ಇದೆ, ಯಾವುದು ಸರಿ ಇಲ್ಲ, ರಾಜೀನಾಮೆ ಯಾವ ಕಾರಣಕ್ಕೆ ನೀಡುತ್ತಿದ್ದಾರೆ ಎನ್ನುವುದನ್ನು ಸ್ಪೀಕರ್ ಪರಿಶೀಲನೆ ಮಾಡುತ್ತಾರೆ ಎಂದರು.
ಅತೃಪ್ತ 10 ಶಾಸಕರು ಸುಪ್ರೀಂ ಆದೇಶದಂತೆ ಇಂದು ರಾಜೀನಾಮೆ ನೀಡಿದರೆ, ಅದನ್ನ ಸ್ಪೀಕರ್ ಇವತ್ತೇ ಅಂಗೀಕರಿಸಬೇಕು ಅಂತಾ ಏನಿಲ್ಲ. ಶಾಸಕರ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸುವುದು ಸರಳವಾದ ಕೆಲಸವಲ್ಲ ಎಂದು ಅವರು, ಈ ಕುರಿತ ಸಂಪೂರ್ಣ ಅಧಿಕಾರ ಸ್ಪೀಕರ್ ಅವರಿಗಿದೆ ಎಂದರು.
ಸುಪ್ರೀಂ ಕೋರ್ಟ್ ಸ್ಪೀಕರ್ ಅವರಿಗೆ ಸೂಚನೆ ನೀಡಿದರು ಸಹ ಸುಪ್ರೀಂ ಕೋರ್ಟ್ಗೆ ಉತ್ತರ ನೀಡುವ ಅಧಿಕಾರ ಸ್ಪೀಕರ್ಗೆ ಇದೆ. ರಾಜ್ಯಪಾಲರಿಗೆ ಶಾಸಕರು ರಾಜೀನಾಮೆ ನೀಡಿದ್ದು ಸರಿ ಅಲ್ಲ. ಶಾಸಕರು ರಾಜೀನಾಮೆ ನೀಡುತ್ತಿರುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದರು. ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಮಾಡಿದರೆ, ಅವರ ಸರ್ಕಾರ ಎಷ್ಟು ದಿನ ನಡೆಯುತ್ತದೆ ಎಂದು ಲೇವಡಿ ಮಾಡಿದರು.
ರಾಜ್ಯ ಸರ್ಕಾರ ಮುಂದುವರಿಯುತ್ತದೆ. ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆದಿದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನ ಮತ್ತಷ್ಟು ಬಲಗೊಳಿಸಬೇಕು ಎಂದು ಅವರು ಸೂಚನೆ ನೀಡಿದರು. ಪಕ್ಷಾಂತರ ನಿಷೇಧ ಕಾಯ್ದೆ ಎಲ್ಲಿಯವರೆಗೆ ಬಲಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಕುದುರೆ ವ್ಯಾಪಾರ ನಿಲ್ಲುವುದಿಲ್ಲ. ಅಲ್ಲದೇ ಮೈತ್ರಿ ಸರ್ಕಾರಕ್ಕೆ ಏನು ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.