ಹುಬ್ಬಳ್ಳಿ: ನನಗೆ ಈವರೆಗೂ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಬೇಕೆಂಬ ಆಹ್ವಾನ ಕಾಂಗ್ರೆಸ್ ಮುಖಂಡರಿಂದ ಬಂದಿಲ್ಲ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಕಲವು ದಿನಗಳಿಂದ ಶಂಕರ ಪಾಟೀಲ ಮುನೇನಕೊಪ್ಪ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಅವರು, ''ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಸ್ನೇಹಿತರು ಇದ್ದಾರೆ, ಬಂಧುಗಳು ಇದ್ದಾರೆ. ಆದರೆ, ಈವರೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಗದೀಶ್ ಶೆಟ್ಟರ್ ಸೇರಿದಂತೆ ಯಾವೊಬ್ಬ ನಾಯಕರು ನನ್ನೊಂದಿಗೆ ಮಾತನಾಡಿಲ್ಲ. ಹೀಗಾಗಿ ಬಿಜೆಪಿ ತೊರೆಯುವ ಮಾತಿಲ್ಲ'' ಎಂದರು.
''ನಾನು ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ ಅಲ್ಲ. ಮನೆಯಲ್ಲಿ ಕಹಿ ಘಟನೆ ನಡೆದಿದ್ದು, ಈ ನಿಟ್ಟಿನಲ್ಲಿ ಮನಸ್ಸು ಸಹ ಸರಿ ಇಲ್ಲ. ನಾನು ರಾಜಕೀಯವಾಗಿ ಯಾವುದೇ ಒಂದು ತೀರ್ಮಾನ ಮಾಡಬೇಕಾದರೆ ಜಿಲ್ಲೆಯ 8 ತಾಲೂಕಿನ ಮುಖಂಡರೊಂದಿಗೆ ಚರ್ಚೆ ಮಾಡಿಯೇ ತಿರ್ಮಾನ ತೆಗೆದುಕೊಳ್ಳುತ್ತೇನೆ. ಈ ಹಿನ್ನೆಲೆ ಸದ್ಯ ಯಾವುದೇ ಸಭೆ ಮಾಡಿಲ್ಲ. ಹೀಗಾಗಿ ನವೆಂಬರ್ ವರೆಗೂ ಸಕ್ರಿಯ ರಾಜಕೀಯದಲ್ಲಿ ಇರೋದಿಲ್ಲ. ಆದರೇ ನನಗೆ ಸ್ವಲ್ಪ ಭಿನ್ನಾಭಿಪ್ರಾಯಗಳಿವೆ. ಇದು ಸತ್ಯ ಎಂದು'' ತಮ್ಮ ಅಸಮಾಧಾನ ಹೊರ ಹಾಕಿದರು.
''ಬಿಜೆಪಿಯಲ್ಲಿ ನಾಯಕರೊಂದಿಗೆ ಭಿನ್ನಾಭಿಪ್ರಾಯ ಇರೋದು ಸತ್ಯ, ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಅನೇಕ ಬಿಜೆಪಿ ನಾಯಕರು ಪಕ್ಷ ಬಿಟ್ಟು ಹೋಗಿದ್ದಾರೆ. ಕಾರ್ಯಕರ್ತರಿಗೆ ನೋವಾದಾಗ ನಮಗೆ ಸಂಕಟವಾಗುತ್ತದೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ನನ್ನ ಬೆಳವಣಿಗೆಗೆ ಕಾರಣಿಭೂತರಾಗಿದ್ದಾರೆ. ಇವತ್ತು ಅನಂತಕುಮಾರ್ ಅವರು ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದೀಗ ಪಕ್ಷದ ಎಲ್ಲ ಜವಾಬ್ದಾರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೇಲಿದೆ'' ಎಂದರು.