ಹುಬ್ಬಳ್ಳಿ:ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದಕ್ಕೆ ನಾವು ತಲೆ ಕೆಡಿಸಿಕೊಂಡಿಲ್ಲ. ಆದರೆ ಈ ಹಿಂದೆ ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಈ ಕುರಿತು ತನಿಖೆ ಮಾಡದಂತೆ ಮನವಿ ಮಾಡಿದ್ದರು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ವಿಚಾರವಾಗಿ ತನಿಖೆ ಆಗಲಿ. ತಪ್ಪಿತಸ್ಥರನ್ನು ಜೈಲಿಗೆ ಹಾಕಲಿ. ಆ ಬಗ್ಗೆ ಯಾವುದೇ ತನಿಖೆ ನಡೆದರು ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು. ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ. ಹಿಂದೆಂದೂ ಕಾಣದಂತಹ ಪ್ರವಾಹವನ್ನು ರಾಜ್ಯ ಕಂಡಿದ್ದು, ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ. ಈ ವಿಚಾರವಾಗಿ ರಾಜಕೀಯ ಮಾಡಬಾರದು. ನಾನು ಸಹ ಮಾಡುವುದಿಲ್ಲ. ರಾಜ್ಯದ ಜನ ಇಷ್ಟೆಲ್ಲಾ ಸಂಕಷ್ಟಕ್ಕೆ ಸಿಲುಕಿದರೂ ಸಹ ಕೇಂದ್ರದಿಂದ ಈವರೆಗೆ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಅನೇಕ ಸಂಘ ಸಂಸ್ಥೆಗಳು ನೆರೆ ಪರಿಹಾರ ಒದಗಿಸುತ್ತಿವೆ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ಕೇವಲ ಇಪ್ಪತ್ತು ದಿನಗಳಲ್ಲಿ ಶಿಕಾರಿಪುರಕ್ಕೆ 2 ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ. ಕುಮಾರಸ್ವಾಮಿಯನ್ನು ಕೇವಲ ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಷ್ಟೇ ಸಿಎಂ ಎಂದು ಹೇಳುತ್ತಿದ್ದವರು ಇದೀಗ ಏನು ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ.