ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾಧ್ಯಮದವರೊಂದಿಗೆ ಮಾತನಾಡಿದರು. ಹುಬ್ಬಳ್ಳಿ:ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುವ ಅನುದಾನದಲ್ಲಿ ತಾರತಮ್ಯ ಹಾಗೂ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕೆ ಮಾಡಿದ್ದಾರೆ. ಈ ಟೀಕೆಯನ್ನು ಅರಗಿಸಿಕೊಳ್ಳಲು ಆಗಲಿಲ್ಲ ಅಂದರೆ ಅದು ಅಹಂಕಾರ ತೋರಿಸಿದಂತೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಾ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ತಾರತಮ್ಯ ಸರಿಯಲ್ಲ. ಸಿದ್ದರಾಮಯ್ಯ ಸದನದಲ್ಲಿ ಬರ ಪರಿಹಾರ ವಿಷಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದ ಸಚಿವರು ಭೇಟಿಗೆ ಅವಕಾಶ ಕೊಡುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಸಾಕಷ್ಟು ಸಲ ಕೇಂದ್ರಕ್ಕೆ ಮನವಿ ಮಾಡಿದರೂ ಅವಕಾಶ ಸಿಕ್ಕಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದಾಗಲೂ, ರಾಜ್ಯ ಹಾಗೂ ಕೇಂದ್ರದಲ್ಲಿ ಬೇರೆ ಬೇರೆ ಪಕ್ಷ ಅಧಿಕಾರದಲ್ಲಿ ಇದ್ದಾಗಲೂ ರಾಜ್ಯಕ್ಕೆ ತಾರತಮ್ಯ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಪುಟದ ಸಚಿವರು ಒಂದು ಸಲ ಭೇಟಿಗೆ ರಾಜ್ಯದ ನಾಯಕರಿಗೆ ಅವಕಾಶ ಕೊಟ್ಟಿಲ್ಲ. ಆಯಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಅಧಿಕಾರಿಗಳನ್ನು ಭೇಟಿ ಮಾಡಲಾಗಿದೆ ಎಂದು ಶೆಟ್ಟರ್ ತಿಳಿಸಿದರು.
200 ಕೋಟಿ ಹಣ ಪತ್ತೆ ವಿಚಾರ:ಒಡಿಶಾದ ಮದ್ಯದ ಉದ್ಯಮಿ ಮತ್ತುಜಾರ್ಖಂಡ್ನ ಕಾಂಗ್ರೆಸ್ ಸಂಸದರ 200 ಕೋಟಿಗೂ ಅಧಿಕ ಹಣ ಪತ್ತೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಂಚರಾಜ್ಯ ಚುನಾವಣಾ ಸಂದರ್ಭದಲ್ಲಿ 90 ಕೋಟಿ ಹಣ ಪತ್ತೆಯಾಗಿರುವ ಬಗ್ಗೆ ಮೊದಲು ಬಹಿರಂಗಪಡಿಸಲಿ. 90 ಕೋಟಿ ಹಣ ಇಬ್ಬರ ಮನೆಯಲ್ಲಿ ಸಿಕ್ಕಿತಲ್ಲ. ಅದು ಮೊದಲು ಯಾರದ್ದು ಅಂತಾ ಹೇಳಲಿ ಎಂದು ಆಗ್ರಹಿಸಿದ್ದಾರೆ.
ತೆಲಂಗಾಣ ಚುನಾವಣೆಗೆ 1000 ಕೋಟಿ ರೂ. ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಯಾವುದೇ ಆಧಾರ ಇಲ್ಲ. ಇದುವರೆಗೆ ಐಟಿ ಈ ಬಗ್ಗೆ ಬಹಿರಂಗ ಮಾಡಿಲ್ಲ. ಮೊದಲು ಆ ಹಣ ಯಾರದು ಎಲ್ಲಿಂದ ಬಂತು ಬಹಿರಂಗ ಮಾಡಲಿ. ಯಾವುದೇ ಆಧಾರ ರಹಿತ ಹೇಳಿಕೆ ಸರಿಯಲ್ಲ. ಯಾವುದೇ ಪಕ್ಷ ಆಗಲಿ ಭ್ರಷ್ಟಾಚಾರ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಹರಿಪ್ರಸಾದ್ ಸಿಎಂ ಬಗ್ಗೆ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ. ಈ ಕುರಿತು ಪಕ್ಷದ ಹಿರಿಯ ನಾಯಕರು ನೋಡಿಕೊಳ್ಳುತ್ತಾರೆ. ಇನ್ನು ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಅನಗತ್ಯವಾಗಿ ಈ ವಿಚಾರ ಪ್ರಸ್ತಾಪ ಮಾಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂಓದಿ:ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ : ನೊಣವಿನಕೆರೆಯ ಶಿವಯೋಗೇಶ್ವರ ಸ್ವಾಮೀಜಿ ಭವಿಷ್ಯ