ಕರ್ನಾಟಕ

karnataka

ETV Bharat / state

ತಾಕತ್ತಿದ್ದರೆ ಅನುದಾನ ತಂದು ಅಭಿವೃದ್ಧಿ ಮಾಡಲಿ, ಅಭಿವೃದ್ಧಿ ನಿಲ್ಲಿಸುವ ಪ್ರವೃತ್ತಿ ನನ್ನದಲ್ಲ: ಶೆಟ್ಟರ್ - Former CM Jagdish Shettar

ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ವಿರುದ್ಧ ಕಾಂಗ್ರೆಸ್ ವಿಧಾನ ಪರಿಷತ್ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

Former CM Jagdish Shettar spoke to the media.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾಧ್ಯಮದವರ ಜೊತೆ ಮಾತನಾಡಿದರು.

By ETV Bharat Karnataka Team

Published : Dec 22, 2023, 4:11 PM IST

ಕಾಂಗ್ರೆಸ್‌ ಎಂಎಲ್‌ಸಿ ಜಗದೀಶ್ ಶೆಟ್ಟರ್ ಹೇಳಿಕೆ

ಹುಬ್ಬಳ್ಳಿ:ತಾಕತ್ತಿದ್ದರೆ ಅನುದಾನ ತಂದು ಸೆಂಟ್ರಲ್ ಕ್ಷೇತ್ರದ ಅಭಿವೃದ್ಧಿ ಮಾಡಬೇಕು. ಅದನ್ನು ಬಿಟ್ಟು ನನ್ನ ಮೇಲೆ ಗೂಬೆ ಕೂರಿಸುವುದು ಸಮಂಜಸವಲ್ಲ ಎಂದು ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಆರೋಪಕ್ಕೆ ಕಾಂಗ್ರೆಸ್‌ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದರು.

ಶೆಟ್ಟರ್ ಪ್ರಭಾವ ಬಳಸಿ ಕ್ಷೇತ್ರದ ಅನುದಾನ ಕಡಿತಗೊಳಿಸಿದ್ದಾರೆ ಎಂದು ಮಹೇಶ್ ಟೆಂಗಿನಕಾಯಿ ಇತ್ತೀಚೆಗೆ ಆರೋಪಿಸಿದ್ದರು. ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿ ಶೆಟ್ಟರ್, ಹೊಸ ಸರ್ಕಾರ ಬಂದಿದೆ. ಹೋಗಿ ಒಂದು ರೂಪಾಯಿ ಮಂಜೂರು ಮಾಡಿಸಿಕೊಂಡು ಬರಲು ಇವರಿಗೆ ಆಗಿಲ್ಲ. ಅನುದಾನ ತರುವ ತಾಕತ್ತು ಇಲ್ಲ. ತಾಕತ್ತಿಲ್ಲದೆ ಸುಮ್ಮನೆ ಜಗದೀಶ್ ಶೆಟ್ಟರ್ ಮೇಲೆ ಆರೋಪ ಮಾಡುತ್ತೀರಿ?, ಹುಬ್ಬಳ್ಳಿಯಲ್ಲಿ ಯಾರೇ ಜೋರಾಗಿ ಕೆಮ್ಮಿದರೂ ಅದಕ್ಕೆ ಜಗದೀಶ್ ಶೆಟ್ಟರ್ ಕಾರಣವೇ? ಇಂಥ ಚಿಲ್ಲರೆ ರಾಜಕಾರಣ ಮಾಡಲು ಹೋಗುವುದಿಲ್ಲ ಎಂದು ತಿರುಗೇಟು ಕೊಟ್ಟರು.

ಅನುದಾನ ನಿಲ್ಲಿಸುವ ಪ್ರವೃತ್ತಿ ನನ್ನದಲ್ಲ: ಮಹೇಶ್ ಟೆಂಗಿನಕಾಯಿ ಅವರು ರೆಡಿಮೇಡ್ ಕ್ಷೇತ್ರ ತೆಗೆದುಕೊಂಡಿದ್ದಾರೆ. ನಾನು ಈಗಾಗಲೇ ಸಾಕಷ್ಟು ಅನುದಾನ ತಂದಿದ್ದೇನೆ. ಇದು ನನ್ನ ಪ್ರೀತಿಯ ಕ್ಷೇತ್ರ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ಏನು ಬೇಕೋ ಅದನ್ನು ಮಾಡುವೆ. ಸದ್ಯ ನಡೆಯುತ್ತಿರೋದು ನನ್ನ ಅವಧಿಯಲ್ಲಿ ತಂದ ಕಾಮಗಾರಿಗಳು. ಅವರಿಗೆ ನಾನು ಈ ಹಿಂದೆ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳುವ ಸೌಜನ್ಯ ಕೂಡಾ ಇಲ್ಲ. ಕ್ಷೇತ್ರಕ್ಕೆ ಮಂಜೂರಾದ ಅನುದಾನ ನಿಲ್ಲಿಸುವ ಪ್ರವೃತ್ತಿ ನನ್ನದಲ್ಲ ಎಂದು ಹೇಳಿದರು.

ತಾಂತ್ರಿಕ ಕಾರಣದಿಂದ ತಾತ್ಕಾಲಿಕವಾಗಿ ಕಾಮಗಾರಿ ನಿಂತಿರಬಹುದು. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ. ನಾನೂ ಸಹ ವಿಧಾನ ಪರಿಷತ್ ಸದಸ್ಯ. ನನ್ನ ಅನುದಾನವನ್ನು ಸೆಂಟ್ರಲ್ ಕ್ಷೇತ್ರಕ್ಕೆ ಖರ್ಚು ಮಾಡುತ್ತಿದ್ದೇನೆ. ಹೊಸದಾಗಿ ಹತ್ತು ಕೋಟಿ ಅನುದಾನ ತರಲಿ, ಹಿಂದೆ ಮಂಜೂರಾಗಿದ್ದಕ್ಕೆ ಬಡಿದಾಡಬೇಡಿ ಎಂದರು.

ಬಿಜೆಪಿಯನ್ನು ವಾಚಾಮಗೋಚರವಾಗಿ ಬೈತಿದ್ದ ದೇವೇಗೌಡರು ಈಗ ಅದೇ ಪಕ್ಷವನ್ನು ಅಪ್ಪಿಕೊಳ್ತಿದ್ದಾರೆ ಎಂದು ದೇವೇಗೌಡರು ಮತ್ತು ಪ್ರಧಾನಿ ಮೋದಿ ಭೇಟಿ ಬಗ್ಗೆ ಶೆಟ್ಟರ್ ವ್ಯಂಗ್ಯವಾಡಿದರು. ಒಂದು ಕಾಲಕ್ಕೆ ಬಿಜೆಪಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದರು. ರಾಮಮಂದಿರದ ಬಗ್ಗೆಯೂ ದೇವೇಗೌಡರು ಟೀಕಿಸುತ್ತಿದ್ದರು. ಆದರೆ ಈಗ ಅದೇ ಪಕ್ಷವನ್ನು ಅಪ್ಪಿಕೊಳ್ಳುತ್ತಿದ್ದಾರೆ.‌ ಕುಟುಂಬ ಸದಸ್ಯರೊಂದಿಗೆ ನಿನ್ನೆ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಚುನಾವಣಾ ಮೈತ್ರಿ ಕುರಿತು ಮಾತನಾಡಿದ್ದಾರೆ. ಗೌಡರು ಎಷ್ಟು ಸೀಟು ಕೇಳಿದ್ದಾರೋ, ಅವರು ಎಷ್ಟು ಸೀಟು ಕೊಡ್ತಾರೆ ಅನ್ನೋದು ಅವರವರಿಗೆ ಬಿಟ್ಟದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೈಕಮಾಂಡ್ ನಾಯಕರ ಭೇಟಿ ಮಾಡಿಲ್ಲ:ಕಾಂಗ್ರೆಸ್​ನಿಂದ ಯಾರನ್ನೇ ನಿಲ್ಲಿಸಿದರೂ ನಾನು ಫೈಟ್ ಮಾಡುತ್ತೇನೆ. ನನ್ನ ವೈಯಕ್ತಿಕ ಕೆಲಸಗಳಿಗಾಗಿ ನಾನು ದೆಹಲಿಗೆ ಹೋಗಿದ್ದೆ. ಯಾವುದೇ ಹೈಕಮಾಂಡ್ ನಾಯಕರನ್ನು ಭೇಟಿ ಆಗಿಲ್ಲ. ನನಗಿಂತ ಒಂದು ದಿನ ಮುಂಚೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದರು. ಅದಾದ ನಂತರ ನಾನು ಹೋಗಿದ್ದೆ. ಅವರು ಪ್ರಧಾನಿಗಳನ್ನು ಭೇಟಿಯಾಗಲು ಹೋಗಿದ್ದರು. ನಾನು ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ. ಈ ವೇಳೆ ಯಾವುದೇ ನಾಯಕರನ್ನು ಭೇಟಿಯಾಗಿಲ್ಲ. ಯಾವುದೇ ಚುನಾವಣೆ ವಿಚಾರವನ್ನು ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್​ನಿಂದ ಯಾರೇ ಸ್ಪರ್ಧಿಸಿದರೂ ಗೆಲುವಿಗೆ ಶ್ರಮಿಸುವೆ: ಧಾರವಾಡ ಲೋಕಸಭೆಗೆ ಆಕಾಂಕ್ಷಿಯಾಗಿ ಶೆಟ್ಟರ್ ಹೆಸರು ಶಿಫಾರಸು ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇನ್ನೂ ಯಾರ ಹೆಸರನ್ನೂ ಕಳುಹಿಸಿಲ್ಲ. ಅದು ಹೇಗೆ ನನ್ನದೇ ಒಂದು ಹೆಸರು ಕಳುಹಿಸಿದ್ದಾರೆ ಅಂತ ಹೇಳ್ತೀರಿ? ನಿಮಗೆ ಆ ಪಟ್ಟಿ ಕೊಟ್ಟವರು ಯಾರು? ಮೊನ್ನೆಯಷ್ಟೇ ವೀಕ್ಷಕರ ಸಭೆಯಾಗಿದೆ. ಟಿಕೆಟ್ ಆಕಾಂಕ್ಷಿಗಳ ಶಾರ್ಟ್ ಲಿಸ್ಟ್ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಇಷ್ಟರ ನಡುವೆಯೇ ನನ್ನದೊಂದೇ ಹೆಸರು ಕಳಿಸಿದ್ದಾರೆ ಅಂತ ಹೇಳ್ತಿದ್ದೀರಿ. ಸಿಎಂ ಸಮ್ಮುಖದಲ್ಲಿಯೇ ನಾನು ಚುನಾವಣೆಗೆ ನಿಲ್ಲಲ್ಲ ಅಂತ ಹೇಳಿದ್ದೇನೆ. ಕಾಂಗ್ರೆಸ್​ನಿಂದ ಯಾರನ್ನೇ ನಿಲ್ಲಿಸಿದರೂ ನಾನು ಫೈಟ್ ಮಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆ ಎಂದರು.

ಸಂಸದರ ಅಮಾನತು ಪ್ರಜಾಪ್ರಭುತ್ವಕ್ಕೆ ಮಾರಕ:ಲೋಕಸಭೆಯಲ್ಲಿ ಗದ್ದಲ‌ ಮಾಡಿದ್ದಾರೆಂಬ ನೆಪವಿಟ್ಟುಕೊಂಡು ನೂರಾರು ಸಂಸದರನ್ನು ಅಮಾನತು ಮಾಡಿದ್ದು ಪ್ರಜಾಪ್ರಭುತ್ವಕ್ಕೆ ಮಾರಕ. ವಿರೋಧ ಮಾಡಿದವರನ್ನು ಅಮಾನತು ಮಾಡುತ್ತ ಹೋದ್ರೆ ಹೇಗೆ?. ಇದರ ಬಗ್ಗೆ ಜನರೇ ತೀರ್ಮಾನ ತಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಇದನ್ನೂಓದಿ: ಪಿಎಂ ಆವಾಸ್‌ ಸೂರು: 'ಫಲಾನುಭವಿ ₹1 ಲಕ್ಷ ಕಟ್ಟಿದರೆ ಸಾಕು ಉಳಿದಿದ್ದು ಸರ್ಕಾರ ಭರಿಸಲಿದೆ'- ಸಚಿವ ಜಮೀರ್

ABOUT THE AUTHOR

...view details