ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದ ಸಿದ್ದಾರೂಢ ಮಠದ ಆವರಣದಿಂದ ನೆಹರೂ ಮೈದಾನದವರೆಗೆ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಶಾಸಕ ಪ್ರಸಾದ್ ಅಬ್ಬಯ್ಯ ಚಾಲನೆ ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೆಟ್ಟರ್, ಮುಂಬರುವ 2023 ರ ಚುನಾವಣೆಯಲ್ಲಿ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವೆ. ಮತ್ತೊಬ್ಬರನ್ನು ಕಣಕ್ಕೆ ಇಳಿಸುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ ಬೆನ್ನೆಲ್ಲೇ ಈಗ ಉಲ್ಟಾ ಹೊಡೆದಿದ್ದಾರೆ. ನಾನಾಗಿಯೇ ಹು-ಧಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿರಲಿಲ್ಲ. ನೀವು ಕೇಳಿದ ಪ್ರಶ್ನೆಗೆ ಮಾತ್ರ ನಾನು ಉತ್ತರಿಸಿದ್ದೇನೆ. ನೀವೇ ಎಬ್ಬಿಸಿ ಕೊಡ್ತೀರಿ. ನಂತರ ಹಂಗೇಕೆ ಹೇಳ್ತೀರಿ ಅಂತ ಪ್ರಶ್ನಿಸ್ತೀರಿ ಎಂದು ಶೆಟ್ಟರ್ ಮಾಧ್ಯಮದವರ ಮೇಲೆ ಸಿಡಿಮಿಡಿಗೊಂಡರು.
ಕೇಂದ್ರದ ಎಸ್ಎಸ್ಸಿ ಪರೀಕ್ಷೆಯಲ್ಲಿ ಕನ್ನಡದ ಕಡೆಗಣನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಾದೇಶಿಕ ಭಾಷೆಗಳನ್ನು ಕೇಂದ್ರ ಸರ್ಕಾರ ಕಡೆಗಣಿಸ್ತಿಲ್ಲ. ಐಎಎಸ್ ಪರೀಕ್ಷೆಯಲ್ಲಿಯೂ ಕನ್ನಡಕ್ಕೆ ಆದ್ಯತೆ ನೀಡಿದೆ. ಕನ್ನಡ ಭಾಷೆಯಲ್ಲಿಯೇ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಗಳಾಗಿದ್ದಾರೆ. ಹಾಗೇನಾದ್ರೂ ಕನ್ನಡಕ್ಕೆ ಅನ್ಯಾಯವಾಗಿದ್ದರೆ, ಕೇಂದ್ರದ ಜೊತೆ ಮಾತಾಡ್ತೀನಿ. ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಗುವಂತಹ ಕೆಲಸ ಮಾಡ್ತೇವೆ. ಸ್ಪರ್ಧಾತ್ಮಕ ಪರೀಕ್ಷೆ ಕನ್ನಡ ಭಾಷೆಯಲ್ಲಿಯೇ ಬರೆಯುವಂತೆ ಒತ್ತು ಕೊಡ್ತೇವೆ. ಕನ್ನಡಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡುತ್ತೇವೆ. ಹಿಂದೆ ಈ ರೀತಿ ಆದಾಗಲೂ ಕೇಂದ್ರದ ಮೇಲೆ ಒತ್ತಡ ತಂದು ಸರಿ ಮಾಡಿದ್ದೇವೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುತ್ತೇವೆ ಎಂದು ಶೆಟ್ಟರ್ ಅಭಯ ನೀಡಿದರು.