ಹುಬ್ಬಳ್ಳಿ: ಬಿಜೆಪಿ ಪಕ್ಷದಲ್ಲಿನ ವ್ಯವಸ್ಥೆಯಿಂದ ನೊಂದು ರಾಜ್ಯದಲ್ಲಿ ಬಹಳಷ್ಟು ಜನ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಇದನ್ನು ಬಿಜೆಪಿಯವರು ಆಪರೇಷನ್ ಹಸ್ತ ಎಂದು ಹೇಳುತ್ತಿದ್ದಾರೆ. ಸ್ವಇಚ್ಛೆಯಿಂದ ಯಾರಾದರೂ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋದರೆ ಅದು ಆಪರೇಷನ್ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿರುವಂತಹ ಅಸಮಾಧಾನ, ನಾಯಕತ್ವದ ಕೊರತೆಯಿಂದಾಗಿ ಕಾರ್ಯಕರ್ತರು ಮತ್ತು ನಾಯಕರು ಇಂದು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಇದೊಂದು ರಾಜಕೀಯ ಧ್ರುವೀಕರಣ, ಆಪರೇಷನ್ ಹಸ್ತ ಎಂದು ಹೇಳುವ ಅವಶ್ಯಕತೆ ಇಲ್ಲ ಎಂದರು.
ಇನ್ನು, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಪ್ರೆಸ್ ಮೀಟ್ ಕರೆದದ್ದು ನನಗೆ ಗೊತ್ತಿಲ್ಲ. ಇದು ನನಗೆ ಸಂಬಂಧ ಇಲ್ಲದ ವಿಚಾರ. ಮುನೇನಕೊಪ್ಪ ಅವರು ಬಿಜೆಪಿ ತೊರೆದು ಕಾಂಗ್ರೆಸ್ಗೆ ಬರುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ನಾನು ಇದುವರೆಗೆ ಅವರ ಜೊತೆ ವೈಯಕ್ತಿಕವಾಗಿ ಮಾತುಕತೆ ನಡೆಸಿಲ್ಲ. ಈ ಬಗ್ಗೆ ನಾನು ಏನೂ ಹೇಳಲು ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ರಾಜ್ಯ ಬಿಜೆಪಿ ಇಂದು ದಯನೀಯ ಸ್ಥಿತಿಯಲ್ಲಿದೆ. ಸಂಘಟನೆ ಮತ್ತು ನಾಯಕತ್ವ ಇಲ್ಲದಿರುವುದರಿಂದ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ. ಇನ್ನು ಹಲವು ನಾಯಕರು ಬಿಜೆಪಿಯಿಂದ ನೊಂದು ಕಾಂಗ್ರೆಸ್ಗೆ ಬರುತ್ತಿದ್ದಾರೆ. ಪಕ್ಷದ ಅಧ್ಯಕ್ಷರ ಅವಧಿ ಮುಗಿದರೂ ಇದುವರೆಗೂ ಅವರಿಗೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಆಗಿಲ್ಲ. ಅಲ್ಲದೆ ಸರ್ಕಾರ ಬಂದು ನೂರು ದಿನ ಕಳೆದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಇಂತಹ ಪರಿಸ್ಥಿತಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಬಂದಿರಲಿಲ್ಲ ಎಂದು ಲೇವಡಿ ಮಾಡಿದರು.