ಕರ್ನಾಟಕ

karnataka

ಅಧಿಕಾರಿಗಳ ವರ್ಗಾವಣೆಯಲ್ಲಿ ಕಾಂಗ್ರೆಸ್ ಮೊದಲಿನಿಂದಲೂ ಎಡವಟ್ಟು ಮಾಡಿಕೊಂಡು ಬರುತ್ತಿದೆ: ಬಸವರಾಜ ಬೊಮ್ಮಾಯಿ ಆರೋಪ

By ETV Bharat Karnataka Team

Published : Oct 7, 2023, 5:55 PM IST

ಶಾಮನೂರು ಶಿವಶಂಕರಪ್ಪನವರು ಎತ್ತಿದ ಪ್ರಶ್ನೆಗಳಿಗೆ ಸಿಎಂ ಉತ್ತರ ಕೊಡಬೇಕು. ಸಿಎಂ ಉತ್ತರ ನೀಡುವವರೆಗೆ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಾತಿಯ ಕರಿನೆರಳು ಬೀಳುವಂತದ್ದು, ಆಡಳಿತದ ಒಳ್ಳೆಯ ಲಕ್ಷಣ ಅಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

Former CM Basavaraj Bommai spoke to the media.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮದವರ ಜೊತೆ ಮಾತನಾಡಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮದವರ ಜೊತೆ ಮಾತನಾಡಿದರು.

ಹುಬ್ಬಳ್ಳಿ:ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಎಡವಟ್ಟು ಮಾಡಿಕೊಂಡು ಬರುತ್ತಿದೆ. ಅಧಿಕಾರಿಗಳ ವರ್ಗಾವಣೆ ವಿಷಯ ಬಹಳಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲಾ ಸಮಾಜಕ್ಕೂ ನ್ಯಾಯ ಕೊಡ್ತೀವಿ ಅಂತ ಹೇಳಿದ್ರು. ಆದರೆ ಅದು ಆಗಿಲ್ಲ ಎಂದು ಮಾಜಿ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ಸರ್ಕಾರದ ಒಳ ಸಮಸ್ಯೆಗಳು ಬೇರೆ ಬೇರೆ ರೂಪದಲ್ಲಿ ಹೊರಗೆ ಬರುತ್ತಿವೆ. ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪನವರು ಎತ್ತಿದಂತಹ ಪ್ರಶ್ನೆಗಳಿಗೆ ಸಿಎಂ ಉತ್ತರ ಕೊಡಬೇಕು. ಉತ್ತರ ನೀಡುವವರೆಗೂ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಾತಿಯ ಕರಿನೆರಳು ಬೀಳುವಂತದ್ದು, ಆಡಳಿತದ ಒಳ್ಳೆಯ ಲಕ್ಷಣ ಅಲ್ಲ. ಮುಖ್ಯಮಂತ್ರಿಗಳು ಎಷ್ಟು ದಿವಸ ಮುಂದುವರಿಸಿಕೊಂಡು ಹೋಗುತ್ತಾರೆ, ಅಷ್ಟು ಕೆಟ್ಟ ಹೆಸರು ಬರುತ್ತೆ ಎಂದರು.

ಜಾತಿಗಣತಿ ಬಹಿರಂಗಪಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಾವು 2014-15 ರಲ್ಲಿ ಶೈಕ್ಷಣಿಕ ಮತ್ತು ಆರ್ಥಿಕತೆಯ ಗಣತಿಗೆ ಆಜ್ಞೆ ಮಾಡಿದ್ವಿ. ಎಲ್ಲೂ ಕೂಡ ಜಾತಿ ಗಣತಿ ಮಾಡಲು ಹೇಳಿರಲಿಲ್ಲ. ಎಲ್ಲರಿಗೂ ಕೂಡ ಗೊತ್ತಿದೆ, ಇದು ಜಾತಿಗಣತಿಯಲ್ಲ ಎಂದು ಹೇಳಿದರು.

ಸಮಾಜಘಾತುಕ ಶಕ್ತಿಗಳಿಗೆ ಪ್ರಚೋದನೆ: ಶಿವಮೊಗ್ಗ ಗಲಭೆ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಆಗಲ್ಲ. ಒಂದು ವರ್ಗವನ್ನು ಪೊಲೀಸರು ಮುಟ್ಟಬಾರದು ಅಂತ ಪರೋಕ್ಷವಾಗಿ ಸಂದೇಶ ಬೇಕಾದಷ್ಟಿದೆ. ಸಮಾಜಘಾತುಕ ಶಕ್ತಿಗಳಿಗೆ ಕಾನೂನು, ಪೊಲೀಸ್, ಸರ್ಕಾರದ ಭಯ ಇಲ್ಲ. ಕೋಲಾರದಲ್ಲಿ ಘಟನೆ ನಡೆದಿತ್ತು. ಹೀಗಾಗಿ ಪೂರ್ವ ಬಂದೋಬಸ್ತ್ ಮಾಡಬೇಕಿತ್ತು. ಈದ್ ಮಿಲಾದ್ ಮೆರವಣಿಗೆಯಲ್ಲಿ ಬಂದೋಬಸ್ತ್ ಯಾಕೆ ಮಾಡಲಿಲ್ಲ. ಸರ್ಕಾರ ಬಂದ ನಂತರ ಸಮಾಜಘಾತುಕ ಶಕ್ತಿಗಳಿಗೆ ಪ್ರಚೋದನೆ ಸಿಕ್ತಾ ಇದೆ ಎಂದು ಹೇಳಿದರು.

ಸರ್ಕಾರದಿಂದ ನಯಾಪೈಸೆಯೂ ಬಿಡುಗಡೆ ಆಗಿಲ್ಲ:ಬರ ಪರಿಶೀಲನೆ ತಂಡ ಆಗಮನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಅವರು, ಬರ ಪರಿಹಾರ ನಾವು ಸಮರ್ಥವಾಗಿ ಮಾಡ್ತೀವಿ ಅಂತ ಸಿಎಂ ಹೇಳಿದ್ದಾರೆ. ಬರೀ ಹೇಳಿಕೆಯಲ್ಲಿ ಇವರ ಸರ್ಕಾರದ ಆಡಳಿತ ನಡೀತಾ ಇದೆ. ಬರಗಾಲ ಬಂದು ಮೂರು ತಿಂಗಳಾಯಿತು. ಮುಂಗಾರು ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಇದುವರೆಗೂ ನಯಾ ಪೈಸೆಯೂ ಬರಪೀಡಿತ ಪ್ರದೇಶಕ್ಕೆ ಬಿಡುಗಡೆ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ಕೇಂದ್ರಕ್ಕೆ ಬೊಟ್ಟು ಮಾಡಿ ತೋರಿಸುವಂತದ್ದು, ನಿಮ್ಮ ಬಳಿ ಪ್ರಕೃತಿ ವಿಕೋಪ ನಿಧಿ ಈಗಾಗಲೇ ಇದೆ. ಕೂಡಲೇ ಅದನ್ನು ಬಿಡುಗಡೆ ಮಾಡಿ, ಆಮೇಲೆ ಕೇಂದ್ರದಿಂದ ತೆಗೆದುಕೊಳ್ಳಿ, ನಾವು ನಿಮ್ಮ ಜೊತೆ ಇದ್ದೇವೆ ಎಂದರು.

ಸರ್ಕಾರಕ್ಕೆ ದರಿದ್ರ ಸ್ಥಿತಿ :ನಾವು ನಮ್ಮ ಕಾಲದಲ್ಲಿ ಪ್ರವಾಹ ಬಂತು, ನಾವು ಕೇಂದ್ರಕ್ಕಾಗಿ ಕಾಯ್ತಾ ಕೂರಲಿಲ್ಲ. ಸರ್ಕಾರ ಜೀವಂತ ಇದ್ದದ್ದು ಇಂತಹ ಸಂಕಷ್ಟದಲ್ಲಿ ಗೊತ್ತಾಗುತ್ತೆ. ಈ ಸರ್ಕಾರ ರೈತರ ಪಾಲಿಗೆ ಜೀವಂತ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಹೇಳಿಕೆಯಿಂದ ಬರಗಾಲ ಪರಿಹಾರ ಆಗೋದಿಲ್ಲ, ಅನ್ನೋದು ಮುಖ್ಯಮಂತ್ರಿಗೆ ಹೇಳೋಕೆ ಇಷ್ಟ ಪಡ್ತೀನಿ. ಅಭಿವೃದ್ಧಿಗೆ ಹಣ ಬಿಡುಗಡೆಯಾಗಿಲ್ಲ. ಆಸ್ಪತ್ರೆ ಶಾಲೆ ರಸ್ತೆ ನಿರ್ವಹಣೆಗೂ ಹಣ ಬಿಡುಗಡೆ ಮಾಡಿಲ್ಲ. ಇಂತಹ ದರಿದ್ರ ಸ್ಥಿತಿ ಸರ್ಕಾರಕ್ಕೆ ಬಂದಿದೆ ಎಂದು ಟೀಕಿಸಿದರು.

ಹುಬ್ಬಳ್ಳಿ ಗಲಭೆಕೋರರ ಬಿಡುಗಡೆಗೆ ಡಿಸಿಎಂ ಪತ್ರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಅಪರಾಧಿಗಳನ್ನು ಬಿಡುಗಡೆ ಮಾಡಿ ಅಂತ ಹೇಳುವಂತದ್ದು, ಮತ್ತೆ ತುಷ್ಟೀಕರಣ ರಾಜಕಾರಣ ಎಂಬುದು ಸ್ಪಷ್ಟವಾಗಿದೆ.
ಮದ್ಯದ ಅಂಗಡಿ ವಿಚಾರವನ್ನು ನಾವು ಮೊದಲೇ ವಿರೋಧ ಮಾಡಿದ್ದೇವೆ, ಜನ ಕೂಡ ವಿರೋಧ ಮಾಡಿದ್ದಾರೆ. ಗೃಹಲಕ್ಷ್ಮಿ ಅಂತ ದುಡ್ಡು ಕೊಟ್ಟು, ಅದರ ಎರಡು ಪಟ್ಟು ಆ ಸಂಸಾರದಿಂದ ಕಿತ್ತುಕೊಳ್ಳುವಂಥ ಕೆಲಸ ಸರ್ಕಾರ ಮಾಡ್ತಾ ಇದೆ ಎಂದು ಆರೋಪಿಸಿದರು.

ಸರ್ಕಾರ ಅಬಕಾರಿ ನೀತಿಗಳನ್ನು ಮುಚ್ಚಿ ಹಾಕುವಂತಹ ಕೆಲಸ ಮಾಡ್ತಾ ಇದೆ. ಮುಖ್ಯಮಂತ್ರಿಗಳು ಕೊಡಲ್ಲ ಅಂತಾರೆ ಉಪಮುಖ್ಯಮಂತ್ರಿಗಳು ಆಯಕಟ್ಟಿನ ಜಾಗದಲ್ಲಿ ಮಾಡಬೇಕಾಗುತ್ತದೆ ಅಂತಾರೆ. ಈ ನಿರ್ಣಯ ಗೊಂದಲದ ಗೂಡಾಗಿದೆ. ಮುಖ್ಯಮಂತ್ರಿಗಳು ಮಾಡುವಂತಹ ಎಲ್ಲ ನಿರ್ಣಯಗಳಿಗೆ ಉಪಮುಖ್ಯಮಂತ್ರಿ ವಿರೋಧ ಮಾಡುತ್ತಿದ್ದಾರೆ. ಈ ಸರ್ಕಾರ ಜನಕಂತು ಒಳ್ಳೇದನ್ನು ಮಾಡೋದಿಲ್ಲ ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಇದನ್ನೂಓದಿ:ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಭಯ ಬಿದ್ದು ಬಿಜೆಪಿ ರಾವಣನ ಹೆಸರು ತಂದಿದೆ: ಡಿಸಿಎಂ ಡಿ ಕೆ ಶಿವಕುಮಾರ್

ABOUT THE AUTHOR

...view details