ಧಾರವಾಡ :ಕೋವಿಡ್-19ರ 2ನೇ ಅಲೆ ರಾಷ್ಟ್ರದಲ್ಲಿ ಆರಂಭವಾಗಿದೆ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳದಿಂದ ರಸ್ತೆ, ರೈಲು ಮತ್ತು ವಿಮಾನದ ಮೂಲಕ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ (ಆರ್ಟಿಪಿಸಿಆರ್) ನೆಗೆಟಿವ್ ವರದಿ ಹೊಂದಿರಬೇಕೆಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ಇದನ್ನು ಪ್ರಯಾಣಿಕ ಮತ್ತು ಪ್ರಯಾಣಿಕರನ್ನು ಹೊತ್ತು ತರುವ ಸಂಚಾರಿ ವಾಹನಗಳ ನಿರ್ವಾಹಕರು ಮತ್ತು ಚಾಲಕರು ಪಾಲಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ, ಮಾಸ್ಕ್ ಧರಿಸದವರಿಂದ ದಂಡ ಸಂಗ್ರಹ ಮತ್ತು ಮದುವೆ, ಸಭೆ, ಸಮಾರಂಭಗಳಿಗೆ ಮಾರ್ಷಲ್‍ಗಳ ನೇಮಕಾತಿ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು. ನಿತ್ಯ ಮಹಾರಾಷ್ಟ್ರದಿಂದ ಬಸ್, ರೈಲು, ಲಾರಿ ಮೂಲಕ ಹಾಗೂ ಕೇರಳ ರಾಜ್ಯದಿಂದ ವಿಮಾನದ ಮೂಲಕ ಜಿಲ್ಲೆಗೆ ಪ್ರಯಾಣಿಕರು ಆಗಮಿಸುತ್ತಾರೆ.
ಈ ಕುರಿತು ನಿಯಮ ಪಾಲನೆಗಳ ಪರಿಶೀಲನೆಗೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಸ್ಥಳದಲ್ಲಿಯೇ ಕ್ರಮ ಜರುಗಿಸಲು ಎಸಿಪಿ, ಡಿವೈಎಸ್‍ಪಿ, ಪಾಲಿಕೆಯ ವಲಯ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಧಾರವಾಡ ಮತ್ತು ಹುಬ್ಬಳ್ಳಿಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.
ತಂಡದ ಸದಸ್ಯರು ಮಹಾರಾಷ್ಟ್ರದಿಂದ ಬರುವ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಿರ್ವಾಹಕರು ಕೊರೊನಾ (ಆರ್ಟಿಪಿಸಿಆರ್) ನೆಗೆಟಿವ್ ವರದಿ ಹೊಂದಿರದ ಪ್ರಯಾಣಿಕರನ್ನು ಕರೆದುಕೊಂಡು ಬಂದಿದ್ದರೆ ಅಂತಹವರ ಮೇಲೆ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಅಂತಹ ಬಸ್‍ಗಳನ್ನು ಮುಟ್ಟುಗೋಲು ಹಾಕಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಎಚ್ಚರಿಕೆ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.