ಹುಬ್ಬಳ್ಳಿ:ಸೀಟ್ಗಿಂತ ಹೆಚ್ಚಿನ ವಿದ್ಯಾರ್ಥಿಗಳು ಒಂದೇ ಬಸ್ ಹತ್ತಲು ಹರಸಾಹಸ ಪಡುವಂತ ಸ್ಥಿತಿ ಹುಬ್ಬಳ್ಳಿ-ಧಾರವಾಡ ದಲ್ಲಿ ನಿರ್ಮಾಣವಾಗಿದೆ.
ಅವಳಿನಗರದಲ್ಲಿ ಬಸ್ ಸಂಚಾರ ಒಂದು ಮುಗಿಯದ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್ ಹತ್ತಲು ಹಾಗೂ ಇಳಿಯಲು ಸಾಹಸ ಮಾಡುತ್ತಿದ್ದಾರೆ.
ವಾಣಿಜ್ಯನಗರಿಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ಹತ್ತುವುದೇ ಸಾಹಸದ ಕೆಲಸ ಬೆಳಗ್ಗೆ ಸರಿಯಾದ ಸಮಯಕ್ಕೆ ತರಗತಿಗೆ ತಲುಪುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳು ಬಸ್ಸಿನ ಬಾಗಿಲಿನಲ್ಲಿ ಹಾಗೂ ಫುಟ್ಬೋರ್ಡ್ ಮೇಲೆ ನಿಂತು ಜೀವದ ಹಂಗು ತೊರೆದು ಸಂಚರಿಸುತ್ತಿದ್ದಾರೆ. ಈವರೆಗೂ, ಹುಡುಗರು ಫುಟ್ಬೋರ್ಡ್ ಹಾಗೂ ಬಸ್ ಬಾಗಿಲಲ್ಲಿ ನಿಂತು ಸಂಚರಿಸುತ್ತಿದ್ದರು. ಇದೀಗ ಬಸ್ ಸಮಸ್ಯೆಯಿಂದ ವಿದ್ಯಾರ್ಥಿನಿಯರು ಸಹ ಸ್ವಲ್ಪ ಜಾಗ ಸಿಕ್ಕರೆ ಸಾಕು ಹೇಗೋ ಮನೆ ಮುಟ್ಟಿಕೊಳ್ಳಬಹುದು ಎಂದು ಈ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇಂತಹ ಸಮಸ್ಯೆಗಳು ಗೋಚರಿಸುತ್ತಿದ್ದರೂ ಕೂಡ ಅಧಿಕಾರಿಗಳು ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಅವಶ್ಯಕತೆಗನುಗುಣವಾಗಿ ಬಸ್ ಟೈಮಿಂಗ್ ಹಾಗೂ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಸ್ಯೆಗೆ ಕಡಿವಾಣ ಹಾಕಬೇಕಿದೆ.