ಹುಬ್ಬಳ್ಳಿ: ಅವರೆಲ್ಲ ವಾಣಿಜ್ಯನಗರಿಯ ಯುವ ಉತ್ಸಾಹಿಗಳು. ಇಷ್ಟುದಿನ ಪ್ರಾಣಿ ಸಂರಕ್ಷಣೆ ಕುರಿತು ಹಲವಾರು ಜಾಗೃತಿ ಅಭಿಯಾನವನ್ನು ಮಾಡಿದ ಅವರು ಈಗ ವಿನೂತನ ಪ್ರಯೋಗವೊಂದನ್ನು ಮಾಡುವ ಮೂಲಕ ಹುಬ್ಬಳ್ಳಿ ಮಾತ್ರವಲ್ಲದೆ ರಾಜ್ಯದ ಜನರ ಹುಬ್ಬೇರುವಂತೆ ಮಾಡಿದ್ದಾರೆ.
ವಾಣಿಜ್ಯನಗರಿಯ ರಾಯ್ ಸ್ಟೀಯನ್ ಯುವ ಉತ್ಸಾಹಿಗಳ ತಂಡ ಪ್ರಾಣಿಗಳ ಸಂರಕ್ಷಣೆ ಕುರಿತು ಹತ್ತು ಹಲವು ಅಭಿಯಾನ ಮಾಡಿದ್ದು, ಈಗ ಹೊಸ ತಂತ್ರಜ್ಞಾನದ ಮಷಿನ್ ಒಂದನ್ನು ಕಂಡು ಹಿಡಿದಿದ್ದು, ಇದರಲ್ಲಿ ವೇಸ್ಟ್ ವಾಟರ್ ಬಾಟಲ್ ಹಾಕಿದ್ರೇ ಸಾಕು, ಬೀದಿ ನಾಯಿಗಳಿಗೆ ಆಹಾರ ದೊರೆಯುತ್ತದೆ. ಹೌದು, ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಅದೇ ಬಾಟಲಿಯನ್ನು ಈ ಮಷಿನ್ ನಲ್ಲಿ ಹಾಕಿದ್ರೆ ಹಸಿದ ನಾಯಿಗಳ ಹೊಟ್ಟೆ ತುಂಬಿಸಬಹುದು. ಪರಿಸರವನ್ನು ಸ್ವಚ್ಛ ಸುಂದರವಾಗಿಸಬಹುದು ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಯುವಕರ ತಂಡ ಈ ಯಂತ್ರ ಶೋಧಿಸಿದೆ.
ಆಹಾರ ಸಿಗದೆ ನಾಯಿಗಳು ಹಲವಾರು ಅವಾಂತರ ಸೃಷ್ಟಿಸುತ್ತವೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಆಹಾರಕ್ಕಾಗಿ ಈ ಮಷೀನ್ ಅನ್ನು ಕಂಡು ಹಿಡಿಯಲಾಗಿದೆ. ಉಪಯೋಗಿಸಿದ ಬಾಟಲ್ ಮಷೀನ್ ಒಳಗೆ ಹಾಕಿದರೆ, ಮಷೀನ್ನಲ್ಲಿ ಮೊದಲೇ ಇಡಲಾದ ಪ್ರಾಣಿ ಆಹಾರ ದೊರೆಯುತ್ತದೆ. ಒಂದು ಬಾಟಲಿಗೆ ಇಂತಿಷ್ಟೇ ಆಹಾರ ಎಂಬ ಅಳತೆ ನಿಗದಿ ಮಾಡಲಾಗಿದೆ. ಹೀಗೆ ಖಾಲಿ ಬಾಟಲಿ ಮಷೀನ್ ಒಳಗೆ ಹಾಕಿ ಅದರಿಂದ ಸಿಗುವ ಆಹಾರವನ್ನು ನಾಯಿಗಳಿಗೆ ನೀಡಬಹುದು.