ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಈಗ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಇದರಿಂದಾಗಿ ಈಗ ಜಿಲ್ಲೆಯ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಕಾರ್ಯಕ್ಕೆ ಈಗ ಐದು ಮಂದಿ ಅಜ್ಜಿಯರು ಮುಂದಾಗಿದ್ದಾರೆ.
ಧಾರವಾಡದಲ್ಲಿ ಕೊರೊನಾ ಗೆದ್ದು ಬಂದ್ರು ಐವರು ಅಜ್ಜಿಯರು..!
ಧಾರವಾಡದಲ್ಲಿ ಐದು ಮಂದಿ ವೃದ್ಧೆಯರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇವರು ಜನರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.
ಕೆಲಗೇರಿಯ ಹೊಸೂರ ಓಣಿಯ ಪಾರ್ವತಮ್ಮ ಸಾದರ (78), ನೆಹರು ನಗರದ ಕಮಲಮ್ಮ (70), ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ದ್ರಾಕ್ಷಾಯಿಣಿ (68), ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಜೈಲಾನಿ ಯಲಿಗಾರ (65) ಸೇರಿದಂತೆ ಐವರು ಅಜ್ಜಿಯರು ನವನಗರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಈ ಐವರು ಕೊರೊನಾ ಪೀಡಿತ ಅಜ್ಜಿಯರು, ತಮ್ಮ ಇಳಿ ವಯಸ್ಸಿನಲ್ಲಿಯೇ ಕೊರೊನಾ ಗೆದ್ದು, ಗುಣಮುಖರಾಗಿ ಬಂದಿರುವುದು ಜನರಿಗೆ ತಾಜಾ ಉದಾಹರಣೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಕೈ ಮೀರಿ ಜನರಲ್ಲಿನ ಆತಂಕ ಹೆಚ್ಚಿಸಿರುವ ಬೆನ್ನಲ್ಲೇ ಇವರು ಉಳಿದ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲಿದ್ದಾರೆ.