ಧಾರವಾಡ :ಶಾಲಾ ಮಕ್ಕಳ ಮೇಲೆ ಬೀದಿನಾಯಿ ದಾಳಿ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿಂದು ನಡೆದಿದೆ. ನಾಲ್ವರು ವಿದ್ಯಾರ್ಥಿಗಳು ಸೇರಿ ಐವರಿಗೆ ನಾಯಿ ಕಚ್ಚಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ ಶಾಲೆಗೆ ಹೋಗುವಾಗ ಘಟನೆ ನಡೆದಿದೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಾಯಿ ಸಾವು: ಪಟ್ಟಣ ಪಂಚಾಯ್ತಿಯಿಂದ ನಾಯಿ ಸೆರೆ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಏಟು ತಿಂದ ನಾಯಿ ಮೃತಪಟ್ಟಿದೆ. ಹುಚ್ಚು ನಾಯಿ ದಾಳಿಯಿಂದ ಜನರಲ್ಲಿ ಆತಂಕ ಹೆಚ್ಚಾಗಿತ್ತು.
ಬಳ್ಳಾರಿಯಲ್ಲಿ 6 ಮಂದಿಗೆ ಹುಚ್ಚು ನಾಯಿ ಕಡಿತ: ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದ 12ನೇ ವಾರ್ಡ್ನಲ್ಲಿ ಹುಚ್ಚು ನಾಯಿಯೊಂದು ದಾಳಿ ಮಾಡಿ ಐವರು ವಿದ್ಯಾರ್ಥಿಗಳು ಸೇರಿದಂತೆ 6 ಮಂದಿಗೆ ಗಾಯಗಳಾಗಿರುವ ಘಟನೆ (ಫೆಬ್ರವರಿ 21-2023) ರಂದು ನಡೆದಿತ್ತು. ಪಟ್ಟಣದ 12ನೇ ವಾರ್ಡ್ ವ್ಯಾಪ್ತಿಯಯಲ್ಲಿನ ನವೋದಯ ಕೋಚಿಂಗ್ ಮುಗಿಸಿ ಮನೆಗೆ ತೆರಳುವ ವಿದ್ಯಾರ್ಥಿಗಳು ಸೇರಿದಂತೆ ಹಲವು ಜನರ ಮೇಲೆ ನಾಯಿ ಕಚ್ಚಿ ಗಾಯಗೊಳಿಸಿತ್ತು.
ದಾರಿಮಧ್ಯೆ ಸಿಕ್ಕ ಸಿಕ್ಕವರ ಮೇಲೆರಗಿದ ನಾಯಿ ಬೆನ್ನು, ತೊಡೆ, ಕೈ, ಕಾಲು, ಮುಖದ ಭಾಗಕ್ಕೆ ಕಚ್ಚಿದೆ. ನಂತರ ಬೀದಿ ನಾಯಿಗಳಿಗೂ ಕಚ್ಚಿತ್ತು. ಘಟನೆ ಕಂಡ ಸ್ಥಳೀಯರು ವಿದ್ಯಾರ್ಥಿಗಳನ್ನು ಬಿಡಿಸಿಕೊಂಡು ಹುಚ್ಚುನಾಯಿಯನ್ನು ಹೊಡೆದು ಸಾಯಿಸಿದ್ದರು. ಗಾಯಗೊಂಡಿರುವವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದರು. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿರುವುದರಿಂದ ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆಯಿಂದ ಹೊರ ಬಂದು ಓಡಾಡಲು ಭಯಪಡುವಂತಾಗಿತ್ತು. ನಾಯಿಗಳನ್ನು ಹಿಡಿಯಬೇಕೆಂದು ಸ್ಥಳೀಯರು ಪಟ್ಟಣ ಪಂಚಾಯತ್ನ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಬೀದಿ ನಾಯಿಗಳ ದಾಳಿಗೆ 4 ವರ್ಷದ ಬಾಲಕ ಸಾವು: ಬೀದಿ ನಾಯಿಗಳ ದಾಳಿಗೆ ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿತ್ತು. ದಾಳಿ ಮಾಡಿದ ನಾಯಿಗಳಿಂದ ಪಾರಾಗಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗದೇ ಬಾಲಕ ಪ್ರಾಣ ಬಿಟ್ಟಿದ್ದಾನೆ. ಗಂಭೀರ ಗಾಯಗಳಾದ ಪರಿಣಾಮ ಬಾಲಕ ಆಸ್ಪತ್ರೆಗೆ ತಲುಪುವ ಮುನ್ನವೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ಇದನ್ನೂ ಓದಿ:ಬಳ್ಳಾರಿಯಲ್ಲಿ 6 ಮಂದಿಗೆ ಹುಚ್ಚು ನಾಯಿ ಕಡಿತ; ಹೈದರಾಬಾದ್‌ನಲ್ಲಿ ಬೀದಿನಾಯಿ ದಾಳಿಗೆ ಬಾಲಕ ಬಲಿ