ಹುಬ್ಬಳ್ಳಿ :ಪತ್ನಿಯೊಂದಿಗೆ ಜಗಳ ಮಾಡುವಾಗ ಬಿಡಿಸಲು ಬಂದ ಮಗಳ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದ ತಂದೆಗೆ ಜೀವಾವಧಿ ಶಿಕ್ಷೆ ಹಾಗೂ 1.36 ಲಕ್ಷ ರೂ. ದಂಡ ವಿಧಿಸಿ 5ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ.
ಧಾರವಾಡ ಮಣಿಕಿಲ್ಲಾ ನಿವಾಸಿ ಮೋಹನ್ ಬಿ ಯಣಗಣ್ಣವರ ಶಿಕ್ಷೆಗೀಡಾದ ಅಪರಾಧಿ. ಕೌಟುಂಬಿಕ ಕಲಹದ ಹಿನ್ನೆಲೆ ಮೋಹನ್ ಹಾಗೂ ಪತ್ನಿ ಸುಜಾತಾ ನಡುವೆ ಜಗಳ ನಡೆದಿತ್ತು. ಪತ್ನಿಯ ಶೀಲ ಶಂಕಿಸಿ ಪತ್ನಿ ಹಾಗೂ ಆಕೆಯ ಕುಟುಂಬದವರನ್ನು ಕೊಲೆ ಮಾಡಲು ಆರೋಪಿ ನಿರ್ಧರಿಸಿದ್ದ. 2018ರ ಜುಲೈ 4ರಂದು ಹುಬ್ಬಳ್ಳಿ ಮಥುರಾ ಪಾರ್ಕ್ ಬಳಿ ಇರುವ ಸುಜಾತಾ ತವರು ಮನೆ ಹತ್ತಿರ ಬಂದಿದ್ದ ಮೋಹನ್, ಪತ್ನಿ ಜತೆ ಜಗಳ ತೆಗೆದು ಅವಾಚ್ಯವಾಗಿ ನಿಂದಿಸುತ್ತಿದ್ದ.
ಈ ವೇಳೆ ಬುದ್ಧಿವಾದ ಹೇಳಲು ಮುಂದಾದ ಮಗಳು ನಿಖಿತಾ (17) ಹಾಗೂ ಮಾವ ನಾಗಪ್ಪ ಕಿತ್ತೂರ್(70) ಎಂಬುವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ನಿಖಿತಾ ಮೃತಪಟ್ಟಿದ್ದಳು. ಈ ಕುರಿತು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 5ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ ಎನ್ ಗಂಗಾಧರ ಅವರು ಅಪರಾಧಿ ಮೋಹನ್‌ಗೆ ಜೀವಾವಧಿ ಶಿಕ್ಷೆ ಹಾಗೂ 1.36 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಇದರಲ್ಲಿ ನಾಗಪ್ಪ ಕಿತ್ತೂರ್‌ಗೆ 1 ಲಕ್ಷ ರೂ., ಪತ್ನಿ ಸುಜಾತಾಗೆ 26 ಸಾವಿರ ರೂ. ಮತ್ತು ಇನ್ನು 10 ಸಾವಿರ ರೂ. ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದ್ದರು.