ಹುಬ್ಬಳ್ಳಿ:ಸತತವಾಗಿ ಸುರಿದ ಮಳೆಯಿಂದಾಗಿ ಬೆಳೆ ನಾಶವಾಗಿ ಕಂಗೆಟ್ಟಿದ್ದ ರೈತರಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರವಾಹಕ್ಕೆ ಕೊಚ್ಚಿ ಹೋಗಿ ಅಳಿದುಳಿದಿದ್ದ ಈರುಳ್ಳಿಯನ್ನ ರೈತರು ಕಾಪಾಡಿಕೊಂಡಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಈರುಳ್ಳಿ ಹೊಲದಲ್ಲಿ ಕೊಳೆತು ಹೋಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ರೈತರು ಬೆಳೆದ ಈರುಳ್ಳಿ ಬೆಳೆ ಹಾನಿಗೊಳಗಾಗಿದೆ. ಅಳಿದುಳಿದ ಈರುಳ್ಳಿಯನ್ನ ಮಾರುಕಟ್ಟೆಗೆ ತಂದ್ರೆ ಉತ್ತಮ ಬೆಲೆ ಸಿಗದೇ ರೈತರು ಪರದಾಡುತ್ತಿದ್ದಾರೆ. ಎಪಿಎಂಸಿ ಗೆ ಉತ್ತಮ ಗುಣಮಟ್ಟದ ಈರುಳ್ಳಿ ಬಾರದ ಹಿನ್ನೆಲೆ ಧಿಡೀರ್ ಅಂತಾ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ. ಗುಣಮಟ್ಟದ ಈರುಳ್ಳಿಗೆ ಎಪಿಎಂಸಿಯಲ್ಲಿಯ ಕ್ವಿಂಟಾಲ್ಗೆ 5 ರಿಂದ 7 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಮಳೆಯಿಂದ ಈರುಳ್ಳಿ ಗುಣಮಟ್ಟ ಕಳೆದುಕೊಂಡಿದ್ದು, ಈಗ ಎಪಿಎಂಸಿಯಲ್ಲಿ ಕ್ವಿಂಟಾಲಿಗೆ 2 ರಿಂದ 3 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಇದು ಈರುಳ್ಳಿ ಬೆಳೆಗಾರರನ್ನ ದಿಕ್ಕುತೋಚದಂತೆ ಮಾಡಿದ್ದು, ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಬೇಕು! ಈರುಳ್ಳಿ ಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.