ಹುಬ್ಬಳ್ಳಿ:ಮಲಪ್ರಭಾ ಬಲದಂಡೆ ಕಾಲುವೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತಾಲೂಕಿನ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ ನೇತೃತ್ವದಲ್ಲಿ ಬ್ಯಾಹಟ್ಟಿಯ ಮಲಪ್ರಭಾ ಬಲದಂಡೆ ಕಾಲುವೆ ನಿರ್ಮಾಣ ವಿಭಾಗ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ಹಿರೇಕುಂಬಿ, ಮೊರಬ, ಬ್ಯಾಹಟ್ಟಿ ಕಿರೇಸೂರ ಹಾಗೂ ನವಲಗುಂದ ವ್ಯಾಪ್ತಿಯಲ್ಲಿ 2018-19, 2019-20 ಹಾಗೂ 2020-21ನೇ ಸಾಲಿನಲ್ಲಿ ಮಲಪ್ರಭಾ ಬಲದಂಡೆ ನಾಲೆ ನಿರ್ಮಾಣ ಕಾರ್ಯವನ್ನು ಸರಿಯಾಗಿ ಕೈಗೊಂಡಿಲ್ಲ. ಇದರಿಂದಾಗಿ ರೈತರಿಗೆ ಸಾಕಷ್ಟು ತೊಂದರೆಯಾಗಿದ್ದು, ಕಳಪೆ ಕಾಮಗಾರಿ ನಡೆಸಿ ಸಂಪೂರ್ಣ ಬಿಲ್ ಪಡೆದಿದ್ದಾರೆ ಎಂದು ರೈತರು ಆರೋಪಿಸಿದರು.
ಮಲಪ್ರಭಾ ಬಲದಂಡೆ ಕಾಲುವೆ ನಿರ್ಮಾಣ ವಿಭಾಗ ಕಚೇರಿ ಎದುರು ರೈತರ ಪ್ರತಿಭಟನೆ ಕಳೆದ ಮೂರು ವರ್ಷಗಳಿಂದ 300 ಕೋಟಿ ರೂಗಳಿಗೆ ಕಾಮಗಾರಿ ಕೈಗೆತ್ತಿಕೊಂಡಿದ್ದರೂ ಸಹ ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದು, ಕೆಡಿಪಿ ಸಭೆಯಲ್ಲೂ ಚರ್ಚಿಸಲಾಗಿದೆ. ಆದರೆ ಕಾಮಗಾರಿ ಮಾತ್ರ ಇದುವರೆಗೂ ಪೂರ್ಣಗೊಂಡಿಲ್ಲ. ಕಾಮಗಾರಿ ಸಂಪೂರ್ಣಗೊಳ್ಳದ ಹಿನ್ನೆಲೆ, ರೈತರಿಗೆ ತಮ್ಮ ಹೊಲಗಳಿಗೆ ಹೋಗಲು ವ್ಯವಸ್ಥಿತ ದಾರಿ ಇಲ್ಲದೇ ಪರದಾಡುವಂತಾಗಿದೆ ಎಂದರು.
ಈವರೆಗೆ ನಡೆದ ಕಾಮಗಾರಿ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಜನರಿಗೆ ತಿಳಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದು, ಈ ವೇಳೆ, ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.