ಧಾರವಾಡ: ಕಳೆದ ವರ್ಷ ಪ್ರವಾಹ, ಈ ವರ್ಷ ಕೊರೊನಾ... ಈ ಎಲ್ಲಾ ಸಮಸ್ಯೆಗಳು ಒಂದೆಡೆಯಾದ್ರೆ, ಸೊಸೈಟಿ ನೀಡಿದ ಸೋಯಾ ಬೀಜ ಸಹ ಸರಿಯಾಗಿ ಬೆಳೆಯುತ್ತಿಲ್ಲ. ಕಳೆದ ಕೆಲ ದಿನಗಳ ಹಿಂದೆ ಬಿತ್ತಿದ ಸೋಯಾ ಬೆಳೆ ನೆಲ ಬಿಟ್ಟು ಮೇಲೆಳುತ್ತಿಲ್ಲವಂತೆ. ಹೀಗಾಗಿ ರೈತ ಕಂಗಾಲಾಗಿದ್ದಾರೆ.
ಸರಿಯಾಗಿ ಬೆಳೆಯದ ಸೋಯಾ: ರೈತರಲ್ಲಿ ಆತಂಕ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿನ ರೈತರು, ಸ್ಥಳೀಯ ರೈತ ಸಂಪರ್ಕ ಕೇಂದ್ರದಿಂದ ಸೋಯಾ ಬೀಜ ತಂದು ಹೊಲದಲ್ಲಿ ಬಿತ್ತನೆ ಮಾಡುವ ಮೊದಲು ಪ್ರಾಯೋಗಿಕವಾಗಿ ಮನೆಯಲ್ಲಿ ಪರೀಕ್ಷೆ ಮಾಡಿದ್ದಾರೆ. ಆದರೆ ಸೋಯಾ ಸರಿಯಾಗಿ ಬೆಳೆಯುತ್ತಿಲ್ಲವಂತೆ. ಅಲ್ಲೊಂದು ಇಲ್ಲೊಂದು ಮೊಳಕೆಯೊಡೆದಿದ್ದು ಬಿಟ್ರೆ ಉಳಿದ ಬೀಜ ಮೊಳಕೆ ಸಹ ಒಡೆಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಸೋಯಾ ಹಾಗೂ ಅವರೆ ಪ್ರಮುಖ ಬೆಳೆಯಾಗಿದೆ. ಸಾಕಷ್ಟು ರೈತರು ಸೋಯಾ ಬಿತ್ತನೆ ಮಾಡುತ್ತಾರೆ. ಇದೀಗ ಸೋಯಾ ಬೀಜ ಕೈಕೊಟ್ಟಿರುವುದು ರೈತರನ್ನು ಆತಂಕಕ್ಕೀಡುಮಾಡಿದೆ. ಈ ಕುರಿತು ರೈತ ಸಂಪರ್ಕ ಕೇಂದ್ರಕ್ಕೆ ತಿಳಿಸಿದ್ರೆ, ನಿಮ್ಮ ಹಣ ಬೇಕಾದ್ರೆ ವಾಪಸ್ ಕೊಡುತ್ತೇವೆ. ಬೇರೆ ಬೀಜ ಕೊಡಲು ಆಗುವುದಿಲ್ಲ ಎನ್ನುತ್ತಿದ್ದಾರಂತೆ. ಇದರಿಂದ ಸಾಲ ಮಾಡಿ ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದ ರೈತರು ಈಗ ಕಂಗಾಲಾಗಿ ಹೋಗಿದ್ದಾರೆ.
ಈ ಸಲ ಮುಂಗಾರು ಉತ್ತಮವಾಗಿದ್ದು, ಬಿತ್ತನೆಗೆ ಹಂಗಾಮು ಸಹ ಇದೆ. ಆದ್ರೆ ಇದೇ ಸಂದರ್ಭದಲ್ಲಿ ಕಳಪೆ ಬೀಜ ರೈತರಿಗೆ ಕಷ್ಟ ತಂದಿಟ್ಟಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನ ಹರಿಸಿ ರೈತರಿಗೆ ಸಹಾಯ ಮಾಡಬೇಕಿದೆ.