ಧಾರವಾಡ: ರಾಜ್ಯದಲ್ಲಿ ಬರದ ಛಾಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಿಸಿದ್ದು, ಇದರಿಂದ ಹೊರಗುಳಿದ ಜಿಲ್ಲೆಯ ಕೆಲ ತಾಲೂಕುಗಳ ರೈತರು ಆಕ್ರೋಶಗೊಂಡಿದ್ದಾರೆ.
ಸರ್ಕಾರ ತೀವ್ರ ಮತ್ತು ಸಾಧಾರಣ ಬರ ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಜಿಲ್ಲೆಯ ಮೂರು ತಾಲೂಕುಗಳು ಹೊರಗುಳಿದಿವೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರತಿನಿಧಿಸುವ ಕಲಘಟಗಿ, ಅಳ್ನಾವರವನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಇನ್ನು ನವಲಗುಂದ ವಿಧಾನಸಭಾ ವ್ಯಾಪ್ತಿಯ ಅಣ್ಣಿಗೇರಿ ತಾಲೂಕು ಕೂಡ ಬರದ ಲಿಸ್ಟ್‌ನಿಂದ ಹೊರಗುಳಿದಿದೆ.
ಆದರೆ ಮೂರು ತಾಲೂಕಿನಲ್ಲಿಯೂ ಸಹ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆ ಬಂದಿಲ್ಲ. ಹೀಗಾಗಿ ಮೂರು ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಅಳ್ನಾವರ ಭಾಗದ ಹೊನ್ನಾಪೂರ ಗ್ರಾಮದಲ್ಲಿ ಕಬ್ಬು, ಭತ್ತ ಸೇರಿದಂತೆ ವಿವಿಧ ಬೆಳೆ ಮಳೆಯ ಅಭಾವದಿಂದ ಒಣಗುತ್ತಿದೆ. ಇದರಿಂದ ಜಮೀನಿಗೆ ಖರ್ಚು ಮಾಡಿದ ಹಣವೂ ಸಹ ಸಿಗುವುದಿಲ್ಲ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಅಳ್ನಾವರ ತಾಲೂಕಿನ ಹಳ್ಳಿಗಳ ಪಕ್ಕದಲ್ಲಿನ ಧಾರವಾಡ ತಾಲೂಕಿನ ಕೆಲ ಹಳ್ಳಿಗಳಲ್ಲಿ ಹಲವು ರೈತರ ಜಮೀನಿದೆ. ಧಾರವಾಡ ತಾಲೂಕು ಬರಪೀಡಿತ ಆಗಿದೆ. ಆದರೆ ಅದಕ್ಕೆ ಹೊಂದಿಕೊಂಡಿರುವ ಅಳ್ನಾವರ ತಾಲೂಕು ಬರಗಾಲದ ಪಟ್ಟಿಯಿಂದ ಹೊರಗಿದೆ. ಇದರಿಂದಾಗಿ ತಮಗೆ ಅನ್ಯಾಯವಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು. ಮಳೆಯೇ ಆಗಿಲ್ಲ, ಆದರೂ ಮಳೆಯಾಗಿದೆ ಎಂದು ಬರದಿಂದ ಹೊರಗೆ ಇಟ್ಟಿದ್ದಾರೆ. ಅಧಿಕಾರಿಗಳು ಫೀಲ್ಡ್‌ಗೆ ಬಂದು ಸರ್ವೆ ಮಾಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.