ಹುಬ್ಬಳ್ಳಿ:ಇತ್ತೀಚೆಗೆ ಸಂಭವಿಸಿದ್ದ ಭೀಕರ ಪ್ರವಾಹ ಹಾಗೂ ಭಾರಿ ಮಳೆಯಿಂದಾಗಿ ರೈತರು ಬೀದಿಗೆ ಬಿದ್ದಿದ್ದಾರೆ. ಇನ್ನು ಅವರು ಬೆಳೆದಿದ್ದ ಅಲ್ಪ ಸ್ವಲ್ಪ ಬೆಳೆ ಮಾರಾಟ ಮಾಡಿ ಜೀವನ ನಡೆಸಬೇಕಿದ್ರೆ ಅದಕ್ಕೂ ಕೆಲ ಅಧಿಕಾರಿಗಳು, ದಲ್ಲಾಳಿಗಳು ಕಲ್ಲು ಹಾಕುತ್ತಾರೆ. ಸದ್ಯ ಪಿಕೆಪಿಎಸ್ ಅಧಿಕಾರಿಗಳು ರೈತರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪಿಕೆಪಿಎಸ್ ನಲ್ಲಿ ರೈತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಆರೋಪ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳ ಸೊಸೈಟಿಯು ರೈತರಿಂದ ಶೇಂಗಾ ಖರೀದಿಸಿ ಅದಕ್ಕೆ ಹಣವನ್ನು ಪಾವತಿಸಿತ್ತು. ಆದ್ರೆ, ಶೇಂಗಾದ ಖಾಲಿ ಚೀಲ ಹಾಗೂ ಸಾಗಾಣಿಕೆ ವೆಚ್ಚ ಕೊಡದೆ ಮಹಾಮೋಸ ಮಾಡಿದೆ. ಒಟ್ಟು 15 ಲಕ್ಷಕ್ಕಿಂತ ಹೆಚ್ಚು ಹಣ ಬರಬೇಕಿದ್ದು, ಬಾಡಿಗೆ ಹಣವನ್ನು ಈವರೆಗೆ ಸಂದಾಯ ಮಾಡಿಲ್ಲ ಎಂದು ರೈತರು ದೂರಿದ್ದಾರೆ.
ಇನ್ನು, ಈ ಬಗ್ಗೆ ಸೊಸೈಟಿ ಅಧ್ಯಕ್ಷ ಸಹದೇವಪ್ಪ ಹೊಸಕಟ್ಟಿಯವರನ್ನ ಕೇಳಿದ್ರೆ, ಸೊಸೈಟಿ ಸದಸ್ಯರೆಲ್ಲರೂ ಚರ್ಚೆ ನಡೆಸಿ ಠರಾವು ಹೊರಡಿಸಲಾಗಿದ್ದು, ಅದರಲ್ಲಿ ಬಾಡಿಗೆ, ಖಾಲಿ ಚೀಲದ ಹಣವನ್ನು ಪೂರ್ಣವಾಗಿ ಸಂದಾಯ ಮಾಡಲಾಗುವುದಿಲ್ಲ. ಬದಲಾಗಿ 30 ರೂಪಾಯಿ ಹಣವನ್ನು ಮಾತ್ರ ಕೊಡಲಾಗುವುದು ಉಳಿದ ಹಣವನ್ನು ಸೊಸೈಟಿ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ಹಾರಿಕೆ ಉತ್ತರ ಕೊಡುತ್ತಿದ್ದಾರಂತೆ. ಅಲ್ಲದೇ, ಈ ಬಗ್ಗೆ ಪ್ರಶ್ನಿಸಿದವರ ಮೇಲೆಯೇ ದಬ್ಬಾಳಿಕೆ ಮಾಡಲಾಗುತ್ತಿದೆ ಅನ್ನೋದು ಅನ್ನದಾತರ ಆರೋಪವಾಗಿದೆ.
ರೈತರಿಗೆ ಅನ್ಯಾಯ ಮಾಡಿದ ಯಲಿವಾಳ ಸೊಸೈಟಿಯೂ ರೈತರಿಗೆ ಸಂದಾಯ ಮಾಡಬೇಕಾದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲದೇ, ಸೊಸೈಟಿಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಜಿಲ್ಲಾಡಳಿತ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದೇ ಹೋದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ರೈತರು ಎಚ್ಚರಿಕೆ ನೀಡಿದ್ದಾರೆ.