ಹುಬ್ಬಳ್ಳಿ:ಮಳೆಗಾಲ ಬಂದ್ರೆ ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಆದ್ರೆ ನವಲಗುಂದ, ಕುಂದಗೋಳ ಸೇರಿದಂತೆ ಬೆಣ್ಣೆಹಳ್ಳ ಭಾಗದ ಸುತ್ತಮುತ್ತಲಿರುವ ರೈತರು ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುತ್ತಾರೆ. ಇಲ್ಲಿನ ರೈತರಿಗೆ ಮಳೆ ಬಂದು ಹಳ್ಳ ತುಂಬಿದರೇ ಕಣ್ಣೀರು ಬರುತ್ತಿದೆ. ಆ ಹಳ್ಳಗಳು ರೈತ ಸಮುದಾಯಕ್ಕೆ ಎಷ್ಟು ಅನುಕೂಲವಾಗಿದೆಯೋ ಗೊತ್ತಿಲ್ಲ. ಆದರೆ ಮಳೆಗಾಲದಲ್ಲಿ ದೊಡ್ಡ ಅನಾನುಕೂಲವಂತೂ ಮಾಡಿಯೇ ಹೋಗುತ್ತಿವೆ.
ಬೆಣ್ಣೆ ಹಳ್ಳದ ವ್ಯಾಪ್ತಿಯ ರೈತರು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಹಲವು ವರ್ಷದಿಂದ ಜನಪ್ರತಿನಿಗಳಿಗೆ ಹಾಗೂ ಸರ್ಕಾರಕ್ಕೆ ಜನರು ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದ್ರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಅನೇಕ ಗ್ರಾಮಗಳು ಮುಳುಗಡೆಯಾಗಿದ್ದವು. ಸಾಕಷ್ಟು ಪ್ರಮಾಣ ಬೆಳೆಗಳಿಗೆ ಹಾನಿಯಾಗಿ ರೈತರು ಕಣ್ಣಿರಲ್ಲಿ ಕೈತೊಳೆಯುವಂತಾಗಿತ್ತು. ಪ್ರವಾಹದಲ್ಲಿ ಸಿಲುಕಿ ಅನೇಕರು ಪ್ರಾಣ ಬಿಟ್ಟಿದ್ದರು. ಪ್ರತಿವರ್ಷವೂ ಭರವಸೆಯ ಬಣ್ಣದ ಮಾತುಗಳನ್ನು ನಂಬುವ ರೈತ ಸಮುದಾಯ ಪ್ರತಿ ವರ್ಷ ಅಕ್ಷರಶಃ ಕಣ್ಣೀರಿನಲ್ಲಿ ಕೈ ತೊಳೆಯುತ್ತವೆ. ಈ ಹಳ್ಳಗಳ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಯಾರಿಗೂ ಆಸಕ್ತಿ ಇಲ್ಲ ಎಂದು ರೈತರು ದೂರಿದರು.
ಬೆಣ್ಣೆಹಳ್ಳ ಪ್ರವಾಹ ತಡೆಯಲು ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಸೇತುವೆಗಳ ಎತ್ತರ ಹೆಚ್ಚಳ, ಕೆಲವೊಂದು ಕಡೆ ಅಗಲೀಕರಣ, ಹೂಳು ತೆಗೆಯುವುದು ಇನ್ನಿತರ ಕಾರ್ಯ ಮಾಡಬೇಕು ಎಂಬುವುದು ಘೋಷಣೆ ಮಾತ್ರ ಸೀಮಿತವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪ್ರತಿ ವರ್ಷ ಸಂಭವಿಸುವ ಅನಾಹುತಗಳನ್ನು ತಡೆಯುವ ಕೆಲಸ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಮತ್ತೊಂದು ಹೋರಾಟಕ್ಕೆ ಈ ಭಾಗದ ರೈತರು ಸಿದ್ಧತೆ ಮಾಡಿಕೊಂಡಿದ್ದು, ಜನಪ್ರತಿನಿಧಿಗಳ ಜೊತೆ ಮೊದಲ ಹಂತದಲ್ಲಿ ಮಾತುಕತೆ ನಡೆಸಿ ಬಳಿಕ ಸೆ.3 ರಂದು ಮುಂದಿನ ಹೋರಾಟ ರೂಪುರೇಷ ಸಿದ್ಧಪಡಿಸುವ ಮೂಲಕ ಹೋರಾಟ ತೀವ್ರಗೊಳಿಸುವ ಸೂಚನೆ ನೀಡಿದ್ದಾರೆ.