ಹುಬ್ಬಳ್ಳಿ :ಧಾರವಾಡ ಜಿಲ್ಲೆಯ ಎಲ್ಲ ತಾಲೂಕು ಪ್ರದೇಶಗಳಲ್ಲಿ ಪ್ರತಿ ವರ್ಷ ಸಾವಿರಾರು ಎಕರೆ ಪ್ರದೇಶಗಳಲ್ಲಿ ಕಡಲೆ ಬೆಳೆಯಲಾಗುತ್ತೆ. ಅದೇ ರೀತಿ ಈ ಬಾರಿಯೂ ಈ ಭಾಗದ ರೈತರಿಗೆ ಹಿಂಗಾರಿ ಮಳೆ ಕೊಂಚ ಅನುಕೂಲವಾದ ಹಿನ್ನೆಲೆ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆ ಬೆಳೆದಿದ್ದಾರೆ.
ಕಡಲೆ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ.. ಆದರೆ, ಧಾರವಾಡ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಕಡಲೆ ಖರೀದಿ ಕೇಂದ್ರ ಆರಂಭಿಸಿಲ್ಲ. ಅಷ್ಟೇ ಅಲ್ದೇ, ರೈತರು ಬೆಳೆದ ಕಡಲೆ ಬೆಳೆಗೂ ಇದುವರೆಗೂ ಸರ್ಕಾರದಿಂದ ಬೆಂಬಲ ಬೆಲೆ ನಿಗದಿಪಡಿಸಿಲ್ಲ.
ಹೀಗಾಗಿ, ಬೆಳೆದ ಬೆಳೆಗೆ ಸರ್ಕಾರದಿಂದ ಸೂಕ್ತ ಬೆಂಬಲ ಬೆಲೆ ಘೋಷಣೆಯಾಗದ ಹಿನ್ನೆಲೆ, ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಮುಖವಾಗಿ ಕಳೆದ ವರ್ಷ ರೈತರ ಕೂಗಿಗೆ ಕಿವಿಕೊಟ್ಟ ಸರ್ಕಾರ 5,100 ರೂ. ಬೆಂಬಲ ಬೆಲೆ ನಿಗದಿಪಡಿಸಿ, ಪ್ರತಿಯೊಬ್ಬ ರೈತರಿಂದ 15 ಕ್ವಿಂಟಾಲ್ ಕಡಲೆ ಖರೀದಿಸುವುದಾಗಿ ಘೋಷಿಸಿತ್ತು.
ಆದರೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ರೈತರಿಗೆ ಈ ಬೆಲೆ ತೆಗೆದುಕೊಂಡ ಸಾಲವನ್ನೂ ತೀರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಕಳೆದ ವರ್ಷವೂ ಸಹ ಜಿಲ್ಲೆಯ ಯಾವೊಬ್ಬ ರೈತರೂ ಸಹ ಸರ್ಕಾರದ ಖರೀದಿ ಕೇಂದ್ರಕ್ಕೆ ಕಡಲೆ ಮಾರಾಟ ಮಾಡಲು ಮುಂದಾಗಿರಲಿಲ್ಲ. ಅದೇ ರೀತಿ ಈ ಬಾರಿಯೂ ಜಿಲ್ಲೆಯ ಕಲಘಟಗಿ, ಕುಂದಗೋಳ, ನವಲಗುಂದ ಸೇರಿದಂತೆ ತಾಲೂಕಿನ ಬಹುತೇಕ ಪ್ರದೇಶಗಳ ರೈತರು ಕಡಲೆ ಬೆಳೆದು ಈಗ ರಾಶಿಗೆ ಮುಂದಾಗಿದ್ದಾರೆ.
ಆದ್ರೆ, ಇದುವರೆಗೂ ಜಿಲ್ಲೆಯ ಯಾವೊಂದು ಪ್ರದೇಶದಲ್ಲಿ ಖರೀದಿ ಕೇಂದ್ರವನ್ನ ತೆರೆಯದೇ, ನಿಗದಿತ ಬೆಂಬಲ ಬೆಲೆ ಘೋಷಣೆ ಮಾಡದೇ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ರೈತರ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ. ಸರ್ಕಾರ ಕೂಡಲೇ ಕಡಲೆ ಖರೀದಿ ಕೇಂದ್ರ ಆರಂಭಿಸುವಂತೆ ರೈತರು ಆಗ್ರಹಿಸಿದ್ದಾರೆ.