ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ರೈತರಿಂದ ಮನವಿ ಹುಬ್ಬಳ್ಳಿ:ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯ ಕಾಮಗಾರಿಯನ್ನು ಕೂಡಲೇ ಪ್ರಾರಂಭ ಮಾಡಬೇಕು. ಅಲ್ಲದೇ ರೈತರ ಸಮಸ್ಯೆಗೆ ಸರ್ಕಾರ ಕೂಡಲೇ ಸ್ಪಂದಿಸುವಂತೆ ಆಗ್ರಹಿಸಿ ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟಗಾರರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಭೂಪೇಂದ್ರ ಯಾದವ ಅವರ ಜೊತೆ ಮಾತನಾಡಿದ್ದೇನೆ. ಅರಣ್ಯ ಇಲಾಖೆ ಕ್ಲಿಯರನ್ಸ್ ಸೇರಿದಂತೆ ಮೂರು ವಿಷಯ ಇರುವುದರಿಂದ ಕೂಲಂಕಷವಾಗಿ ಪರಿಶೀಲನೆ ಮಾಡುವುದಿದೆ. ಹೀಗಾಗಿ ಸರಿಯಾಗಿ ಮುಂದುವರೆಯಬೇಕು. ಡಿಸಿಎಂ ಡಿ ಕೆ ಶಿವಕುಮಾರ್ ಅವರ ಜೊತೆ ಈ ಕುರಿತು ಮಾತನಾಡಿದ್ದೇನೆ. ಅವರು ಸರಿಯಾದ ಮಾಹಿತಿ ತಗೆದುಕೊಂಡು ದೆಹಲಿಗೆ ಬರುವುದಾಗಿ ಹೇಳಿದ್ದಾರೆ. ಆಗ ಎಲ್ಲ ಕ್ಲಿಯರೆನ್ಸ್ ಮಾಡಿ ಕೊಡುವ ಭರವಸೆ ನೀಡಿದ್ದೇನೆ" ಎಂದರು.
ಕಳಸಾ ಬಂಡೂರಿ ಹೋರಾಟಗಾರ ಸುಭಾಷ್ ಗೌಡ ಮಾತನಾಡಿ, "ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯ ಕಾಮಗಾರಿಯನ್ನು ಕೂಡಲೇ ಪ್ರಾರಂಭ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಸಚಿವರು ಮುಂದಿನ ಒಂದೂವರೆ ತಿಂಗಳಲ್ಲಿ ಯೋಜನೆಗೆ ಯಾವುದೇ ಕಾನೂನು ಅಡೆತಡೆ ಇಲ್ಲದಿರುವಂತೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಅವರು ಮಾತಿಗೆ ತಪ್ಪಿದರೇ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ. ಇನ್ನು ರೈತರ ಸಾಲ ಮನ್ನಾ, ಬೆಳೆ ಪರಿಹಾರ ಕೊಡಬೇಕು ಎಂದು ಸಚಿವರಿಗೆ ಒತ್ತಾಯ ಮಾಡಿದ್ದೇವೆ" ಎಂದು ತಿಳಿಸಿದರು.
ಪ್ರತಿ ಚುನಾವಣೆ ಬಂದಾಗೊಮ್ಮೆ ರಾಜಕೀಯ ಪಕ್ಷಗಳು ಮಹದಾಯಿ ಹೆಸರಲ್ಲಿ ಬೇಳೆ ಬೇಯಿಸಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಗೆ ಮುನ್ನವೇ ರೈತರ ಸಮಸ್ಯೆ ಇತ್ಯರ್ಥ ಮಾಡಬೇಕು. ಇದು ಸರ್ಕಾರಕ್ಕೆ ಕೊನೆಯ ಗಡುವು. ಇಷ್ಟು ದಿನಗಳ ಕಾಲ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿವೆ. ಈ ಬಗ್ಗೆ ನಿರ್ಲಕ್ಷ್ಯ ತೋರದೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ರೈತರ ಬೆಳೆ ಪರಿಹಾರ ಸಕಾಲಕ್ಕೆ ಒದಗಿಸುವ ಕಾರ್ಯವನ್ನು ಮಾಡಬೇಕು. ರೈತರ ಸಮಸ್ಯೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸುವ ಕಾರ್ಯವನ್ನು ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಹಾವೇರಿ: ಮುಂದುವರಿದ ಕಾಡಾನೆ ಹಾವಳಿ, ಕಟಾವಿಗೆ ಬಂದ ಬೆಳೆ ನಾಶ VIDEO