ಹುಬ್ಬಳ್ಳಿ: ಮೂರ್ಛೆ ಹೋಗಿ ಅಸ್ವಸ್ಥಗೊಂಡಿದ್ದರೈತನೋರ್ವ ಮೃತಪಟ್ಟ ಘಟನೆ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ನಡೆದಿದೆ. ಮಹಾದೇವಪ್ಪ ಫಕೀರಪ್ಪ ಜಾವೂರ್ (75) ಮೃತ ರೈತ. ಬೆಳೆ ಸಾಲ ವಸೂಲಿ ಮಾಡಲು ಬ್ಯಾಂಕ್ವೊಂದರ ಮ್ಯಾನೇಜರ್ ಕಿರುಕುಳ ನೀಡಿದ್ದರಿಂದ ಮಾನಕ್ಕೆ ಅಂಜಿ ನಮ್ಮ ತಂದೆ ಮೃತಪಟ್ಟಿರುವುದಾಗಿ ಮೃತರ ಪುತ್ರ ಫಕೀರಪ್ಪ ಆರೋಪಿಸಿದ್ದಾರೆ.
''ಮೂರ್ಛೆ ಹೋದಾಗ ಅವರನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತ ರೈತ 19 ಎಕರೆ 16 ಗುಂಟಾ ಕೃಷಿ ಜಮೀನನ್ನು ಹೊಂದಿದ್ದು, 2015 ರಲ್ಲಿ ಮೊರಬ ಗ್ರಾಮದಲ್ಲಿರುವ ಬ್ಯಾಂಕ್ನಿಂದ 14 ಲಕ್ಷ 50 ಸಾವಿರ ರೂ. ಬೆಳೆ ಸಾಲ ತೆಗೆದುಕೊಂಡಿದ್ದರು. ಅದಲ್ಲದೇ 2017ರ ವರೆಗೆ ಸುಮಾರು ಎರಡು ವರ್ಷಗಳ ಕಾಲ ಬೆಳೆ ಸಾಲ ರಿನೀವಲ್ ಕೂಡ ಮಾಡಿದ್ದರು. 2017ರಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಸಾಲ ಮರು ಪಾವತಿಯಾಗಿರಲಿಲ್ಲ. ಆದರೆ, ಬರಗಾಲದ ನಡುವೆಯೇ ಬ್ಯಾಂಕ್ ಮ್ಯಾನೇಜರ್ ಸಾಲ ವಸೂಲಿಗೆ ಬಂದಿದ್ದರು. ಇದರಿಂದ ಮಾನಕ್ಕೆ ಅಂಜಿ ಮೃತಪಟ್ಟಿದ್ದಾರೆ'' ಎಂದು ಮಗ ಆರೋಪಿಸಿದ್ದಾರೆ.
"ನಮ್ಮ ತಂದೆ ಗ್ರಾಮದಲ್ಲಿ ಗೌರವಯುತವಾಗಿ ಬಾಳಿದವರು, ಸ್ವಾಭಿಮಾನಿಯಾಗಿದ್ದರು. ಆದರೆ, ಬ್ಯಾಂಕ್ ಮ್ಯಾನೇಜರ್ ನನಗೆ ಯಾವಾಗಲೂ ಫೋನ್ ಕರೆ ಮಾಡಿ ಸಾಲದ ಬಗ್ಗೆ ವಿಚಾರಿಸುತ್ತಿದ್ದರು. ಆದರೆ, ಈ ಬಾರಿ ಏಕಾಏಕಿಯಾಗಿ ಗ್ರಾಮಕ್ಕೆ ಬಂದು ಸಾರ್ವಜನಿಕವಾಗಿ ನಮ್ಮ ತಂದೆಯ ಮಾನ ಹರಾಜು ಹಾಕಿದ್ದಾರೆ. ಇದರಿಂದ ನೊಂದು ನಮ್ಮ ತಂದೆ ಮೃತಪಟ್ಟಿದ್ದಾರೆ. ಈಗ ನಾನು ಆಸ್ತಿ ಮಾರಾಟ ಮಾಡಿ ಸಾಲ ತೀರಿಸುತ್ತೇನೆ. ನಮ್ಮ ತಂದೆಯ ಜೀವ ತಂದು ಕೊಡಿ" ಎಂದು ಫಕೀರಪ್ಪ ಒತ್ತಾಯಿಸಿದ್ದಾರೆ.