ಧಾರವಾಡ :ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರೈತರಿಗೆ ಕೈತುಂಬಾ ಆದಾಯ ಬರುತ್ತಿದೆ. ಧಾರವಾಡದಲ್ಲಿ ರೈತರೋರ್ವರು ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಸಂಪಾದಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟರೂ ಹಲವೆಡೆ ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹಾಗೆಯೇ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ರೈತ ಈರಪ್ಪ ಸಿದ್ದಪ್ಪ ಚಿಕ್ಕಣ್ಣವರ್ ತಮ್ಮ ಒಂದೆಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ. ತಮ್ಮ ಹೊಲದಲ್ಲಿ ಬೋರ್‌ವೆಲ್ ಇಲ್ಲದಿದ್ದರೂ ಹಳ್ಳದ ನೀರನ್ನು ಸಸಿಗಳಿಗೆ ಹಾಯಿಸಿ ಉತ್ತಮ ಫಸಲು ಪಡೆದಿದ್ದಾರೆ. ಇದುವರೆಗೆ ಟೊಮೆಟೊದಿಂದ ಸುಮಾರು 3 ಲಕ್ಷ ರೂಪಾಯಿ ಬಂದಿರುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲವೇ ಕೆಲವು ರೈತರು ಮಾತ್ರ ಟೊಮೆಟೊ ಬೆಳೆ ಬೆಳೆದಿದ್ದಾರೆ. ಟೊಮೆಟೊಗೆ ಭಾರಿ ಬೆಲೆ ಬಂದಿದ್ದು, ಮಾರುಕಟ್ಟೆಯಲ್ಲಿ ಒಂದು ಟ್ರೇ ಟೊಮೆಟೊ 1,800 ರಿಂದ 2,000 ರೂಪಾಯಿಗೆ ಮಾರಾಟವಾಗುತ್ತಿದೆ. ಇವರು ಇದುವರೆಗೂ 10 ರಿಂದ 15 ಬಾರಿ ಟೊಮೆಟೊ ಕಟಾವು ಮಾಡಿ ಮಾರುಕಟ್ಟೆಗೆ ಕಳುಹಿಸಿದ್ದಾರೆ. ಎರಡು ಮೂರು ಬಾರಿ ಕಟಾವು ಮಾಡಿದರೆ ಸುಮಾರು 20 ರಿಂದ 25 ಟ್ರೇ ಟೊಮೆಟೊ ಲಭಿಸುತ್ತದೆ. ಇದನ್ನು ಕಟಾವು ಮಾಡಿ ಹುಬ್ಬಳ್ಳಿ ಹಾಗೂ ಧಾರವಾಡ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ.
ಈರಪ್ಪ ಸಿದ್ದಪ್ಪ ಚಿಕ್ಕಣ್ಣವರ್ ಮಾತನಾಡಿ, "ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದೇವೆ. ಈ ಬಾರಿ ಮಳೆ ಇಲ್ಲದ ಕಾರಣ ಹಳ್ಳದ ನೀರು ಹಾಯಿಸಿದ್ದೆವು. ಉತ್ತಮ ಇಳುವರಿ ಬಂದಿದೆ. ಇದುವರೆಗೂ ಮಾರುಕಟ್ಟೆಗೆ 20 ರಿಂದ 30 ಟ್ರೇ ಟೊಮೆಟೊ ಕಳುಹಿಸಿದ್ದೇವೆ. ಒಟ್ಟು 3 ಲಕ್ಷ ರೂ ಲಾಭ ಬಂದಿದೆ" ಎಂದು ಹೇಳಿದರು.