ಹುಬ್ಬಳ್ಳಿ:ಡಬಲ್ ಮರ್ಡರ್ ಆರೋಪದಲ್ಲಿ ಕಳೆದ 6 ವರ್ಷದಿಂದ ಜೈಲುವಾಸದಲ್ಲಿದ್ದ ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. 2014ರಿಂದ ಇಲ್ಲಿನ ಉಪಕಾರಾಗೃದಲ್ಲಿದ್ದ ವಿಜಯಾನಂದ ಆಗಸ್ಟ್ 1ರಂದು ಜೈಲು ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ.
ಹೈಕೋರ್ಟ್ನಲ್ಲಿ ಹಾಕಿದ್ದ ಜಾಮೀನು ವಜಾ ಆದ ಹಿನ್ನೆಲೆ ಭಯಗೊಂಡು ತಪ್ಪಿಸಿಕೊಂಡು ಹೋಗಿ ಅಣ್ಣಿಗೇರಿಗೆ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ. ನಂತರ ಏಕಾಏಕಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಹಳಿ ಬಳಿ ಶವ ಪತ್ತೆಯಾಗಿತ್ತು.
ಆದರೆ, ಈ ಪ್ರಕರಣ ಸಂಬಂಧ ಮೃತ ಕೈದಿಯ ಕುಟುಂಬಸ್ಥರು ಬೇರೆಯದ್ದೇ ಹೇಳುತ್ತಿದ್ದು, ಜೈಲಾಧಿಕಾರಿಗಳ ಕಿರುಕುಳವೇ ಆತನ ಆತ್ಮಹತ್ಯೆಗೆ ಕಾರಣವಾಗಿರಬಹುದಾ ಎಂಬ ಅನುಮಾನ ಮೂಡಿಸುತ್ತಿದೆ.
ವಿಚಾರಣಾಧೀನ ಕೈದಿ ಆತ್ಮಹತ್ಯೆ ಪ್ರಕರಣ: ಸಾವಿಗೆ ಜೈಲಾಧಿಕಾರಿಗಳೇ ಕಾರಣವಾ..? ಕುಟುಂಬಸ್ಥರ ಆರೋಪವೇನು..? ಮೃತ ಕೈದಿ ವಿಜಯಾನಂದನ ತಾಯಿ ಶೋಭಾ ಈ ಪ್ರಕರಣದಲ್ಲಿ ಜೈಲರ್ ಕೈವಾಡವಿದೆ, ನನ್ನ ಮಗನ ಸಾವಿಗೆ ಜೈಲರ್ ಕಾರಣ ಎಂದು ಆರೋಪಿಸುತ್ತಿದ್ದಾರೆ. ಹುಬ್ಬಳ್ಳಿಯ ಸಬ್ ಜೈಲಿನಲ್ಲಿರುವ ಆತನನ್ನು ನೋಡಲು ಹೋದಾಗ ಮೇಲಧಿಕಾರಿಗಳು ಇಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದನಂತೆ. ಹುಬ್ಬಳ್ಳಿಯಿಂದ ಧಾರವಾಡ ಜೈಲಿಗೆ ಶಿಫ್ಟ್ ಮಾಡಿ ಎಂದರೂ ಸಹ ಮಾಡಲು ಮಾತ್ರ ಅಧಿಕಾರಿಗಳು ಒಪ್ಪುತ್ತಿರಲಿಲ್ಲ. ಇನ್ನು ಸ್ಥಳಾಂತರಕ್ಕೆ ಲಕ್ಷಾಂತರ ಹಣ ಕೊಡುವಂತೆ ಹೇಳುತ್ತಿದ್ದರಂತೆ ಎಂದು ತಾಯಿ ಆರೋಪಿಸಿದ್ದಾರೆ.
ಓದಿ:ಭಾರತಕ್ಕೆ ಮತ್ತೊಂದು ಪದಕ: ಹುಬ್ಬಳ್ಳಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಹಾಕಿ ಪ್ರಿಯರು