ಹುಬ್ಬಳ್ಳಿ:ನೈರುತ್ಯ ರೈಲ್ವೆ ವಲಯದಲ್ಲಿ ನಕಲಿ ನೇಮಕಾತಿ ಜಾಲ ಸಕ್ರೀಯವಾಗಿದ್ದು, ವಂಚಕರು ನಕಲಿ ನೇಮಕಾತಿ ಹೆಸರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಂಚನೆ ಮಾಡಲು ಮುಂದಾಗಿದ್ದಾರೆ. ಸುಮಾರು ದಿನಗಳಿಂದ ಇಂತಹ ಜಾಲ ಸಕ್ರೀಯವಾಗಿದ್ದರೂ, ಇದರ ಸೂತ್ರದಾರರ ಸುಳಿವು ಮಾತ್ರ ಸಿಕ್ಕಿಲ್ಲ. ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನಕಲಿ ನೇಮಕಾತಿಗೆ ಸಂಬಂಧಪಟ್ಟಂತೆ ತನಿಖೆ ಈಗಾಗಲೇ ಶುರುವಾಗಿದೆ.
ಈ ನಡುವೆ ನೈರುತ್ಯ ರೈಲ್ವೆ ಇಲಾಖೆಯ ಕೆಲ ನೌಕರರೇ, ತಮ್ಮ ಮಕ್ಕಳ ಕೆಲಸಕ್ಕಾಗಿ ದುಡ್ಡು ಕೊಟ್ಟು ಮೋಸ ಹೋಗಿದ್ದಾರೆ ಎನ್ನಲಾಗ್ತಿದೆ. ಕಳೆದ ಎರಡ್ಮೂರು ತಿಂಗಳಿಂದ ನಕಲಿ ನೇಮಕಾತಿ ಕುರಿತಂತೆ ರೈಲ್ವೆ ಇಲಾಖೆಯಲ್ಲಿ ಚರ್ಚೆ ಶುರುವಾಗಿದೆ. ರೈಲ್ವೆ ಇಲಾಖೆಯ ನಕಲಿ ನೋಟಿಫಿಕೇಶನ್ ಜೊತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಎಂ (ಜನರಲ್ ಮ್ಯಾನೇಜರ್) ಕೋಟಾದಡಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ನೋಟಿಫಿಕೇಶನ್‌ನಲ್ಲಿತ್ತು.
ರೈಲ್ವೆ ಇಲಾಖೆಯ ನಕಲಿ ನೋಟಿಫಿಕೇಶನ್ ಕೆಲ ದಿನಗಳ ಬಳಿಕ ಇಂತಹ ಹುದ್ದೆಗಳಿಗೆ ಇಂಥವರನ್ನು ನೇಮಕಾತಿ ಮಾಡಲಾಗಿದೆ ಎಂದು ನೇಮಕಾತಿ ಆದೇಶ ಪತ್ರ ಸಹ ಹೊರಡಿಸಲಾಗಿತ್ತು. ಈ ವಿಷಯ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ತಿಳಿದು ಪರಿಶೀಲಿಸಿದ ಬಳಿಕ ಅದು ನಕಲಿ ನೋಟಿಫಿಕೇಶನ್ ಹಾಗೂ ನಕಲಿ ನೇಮಕಾತಿ ಆದೇಶ ಪ್ರತಿ ಎಂಬುದು ತಿಳಿದು ಬಂದಿದೆ. ಅಧಿಕಾರಿಗಳ ಸಹಿ, ಮೊಹರು ಎಲ್ಲವೂ ಅಸಲಿಯಂತೆ ಇತ್ತು. ಇದು ನಕಲಿ ಎಂದು ಅಂದಾಜಿಸಲೂ ಸಾಧ್ಯವಿಲ್ಲದಂತೆ ಮುದ್ರಿಸಲಾಗಿತ್ತು.
ಇದನ್ನೂ ಓದಿ:ಕೋಲಾರದ ಕೆ.ಸಿ.ವ್ಯಾಲಿ ನೀರಿನಲ್ಲಿ ನೊರೆ: ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ಹೀಗಾಗಿ ನೋಟಿಫಿಕೇಶನ್ ಹೊರಡಿಸಿದವರು ಯಾರು..? ಇದರ ಹಿಂದೆ ಇರುವ ಜಾಲ ಯಾವುದು..? ಈ ಬಗ್ಗೆ ಬಯಲಿಗೆಳೆಯಲು ವಲಯದ ಅಧಿಕಾರಿಗಳು, ಆರ್‌ಪಿಎಫ್ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಜಾಗೃತಿ ಮೂಡಿಸಲಾಗಿತ್ತು. ಅದರಂತೆ ಇದೀಗ ಆರ್‌ಪಿಎಫ್‌ನ ಐಜಿ ಅವರಿಂದಲೇ ತನಿಖೆ ಶುರುವಾಗಿದೆ. ಆದರೆ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಕೂಡ ಈವರೆಗೆ ಸಿಕ್ಕಿಲ್ಲ.