ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಮೇ 3ರವರೆಗೆ ಲಾಕ್ಡೌನ್ ಸಡಿಲಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಕರ್ನಾಟಕ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಆ ಪ್ರಕಾರ ಜಿಲ್ಲೆಯ ಪರಿಸ್ಥಿತಿಯನ್ನು ಆಧರಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯಲ್ಲಿ ಕೆಲವು ಚಟುವಟಿಕೆಗಳಿಗೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಯಾವ ಮಾರಾಟಕ್ಕೆ ವಿನಾಯಿತಿ: ಹುಬ್ಬಳ್ಳಿ ನಗರ ಹೊರತುಪಡಿಸಿ ಅವಳಿ ನಗರದ ಹೊರವಲಯ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಆರಂಭಿಸಬಹುದು. ಉತ್ಪಾದನೆ ಮತ್ತು ಇತರೆ ಕೈಗಾರಿಕಾ ಘಟಕಗಳು ತಮ್ಮ ಕಾರ್ಮಿಕರಿಗೆ ಕೈಗಾರಿಕೆಗಳ ಆವರಣದಲ್ಲಿಯೇ ನಿಯಮಾನುಸಾರ ವಸತಿ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಕಾರ್ಮಿಕರಿಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆಯನ್ನು ಸಾಮಾಜಿಕ ಅಂತರದ ನಿಯಮವನ್ನು ಅಳವಡಿಸಿಕೊಂಡು ಮಾಲೀಕರು ಒದಗಿಸಬೇಕು.
ಮಳಿಗೆಗಳು ಮತ್ತು ಸ್ಥಾಪನೆ ಕಾಯ್ದೆಯಡಿ ನೋಂದಣಿಯಾದ ಶಾಪಿಂಗ್ ಮಾಲ್‍ಗಳನ್ನು ಹೊರತುಪಡಿಸಿ ಪ್ರತ್ಯೇಕವಾಗಿ ನಡೆಸಲ್ಪಡುವ ಎಲ್ಲಾ ಅಂಗಡಿಗಳು ಹುಬ್ಬಳ್ಳಿ ನಗರ ಹೊರತುಪಡಿಸಿ ಜಿಲ್ಲೆಯಾದ್ಯಂತ ಸೋಮವಾರದಿಂದ ಗುರುವಾರದವರೆಗೆ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯನಿರ್ವಹಿಸಬಹುದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ವಿನಾಯಿತಿ ಪಡೆದಿರುವ ಚಟುವಟಿಕೆಗಳು: ಸ್ಟೆಷನರಿ ಮತ್ತು ಬುಕ್ ಸ್ಟಾಲ್, ಎಲೆಕ್ಟ್ರಿಕಲ್ ರಿಪೇರಿ, ಪ್ಲಂಬಿಂಗ್, ಪೇಂಟ್, ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಅಂಗಡಿಗಳು ಮತ್ತು ಮರಳು, ಇಟ್ಟಿಗೆ, ಸಿಮೆಂಟ್, ಕಬ್ಬಿಣ ಮೊದಲಾದ ನಿರ್ಮಾಣ ಕಾಮಗಾರಿಗಳ ವಹಿವಾಟುಗಳು.
ಮುಖ್ಯವಾಗಿ ರಿಪೇರಿ ಮತ್ತು ಸರ್ವಿಸ್ ಸೆಂಟರ್ಗಳು, ಟೈಲ್ಸ್ ಅಂಗಡಿಗಳು, ಜೆರಾಕ್ಸ್ ಮತ್ತು ಪ್ರಿಂಟಿಂಗ್, ಆಪ್ಟಿಕಲ್ಸ್, ಅಕ್ಕಿ, ಅಡುಗೆ ಎಣ್ಣೆ, ಹಿಟ್ಟಿನ ಮಿಲ್‍ಗಳು ಮತ್ತು ಅಂಗಡಿಗಳು, ಟೈಯರ್ ಮತ್ತು ಟ್ಯೂಬ್ ಅಂಗಡಿಗಳು ಹಾಗೂ ಮಿನರಲ್ ವಾಟರ್ ಮಾರಾಟ ಮಳಿಗೆ, ಮೊಬೈಲ್ ರಿಪೇರಿ ಅಂಗಡಿಗಳು, ಆಹಾರ ಪಾರ್ಸಲ್ ಮತ್ತು ಹೋಂ ಡೆಲಿವರಿಗೆ ಅನುಮತಿ ನೀಡಲಾಗಿದೆ. ಗ್ಯಾಸ್ ಮತ್ತು ಸ್ಟೌವ್ ರಿಪೇರಿ, ಪ್ರತ್ಯೇಕವಾಗಿರುವ ಕಿರಾಣಿ ಅಂಗಡಿಗಳು, ನೀರು ಮತ್ತು ನೈರ್ಮಲ್ಯದ ಕಾಮಗಾರಿಗಳಿಗೆ ಸಂಬಂಧಿಸಿದ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ.
ಈ ಎಲ್ಲಾ ಅಂಗಡಿಗಳು ತಮ್ಮ ಶೇ. 50ರಷ್ಟು ಕೆಲಸಗಾರರನ್ನು ಬಳಸಿಕೊಳ್ಳಬೇಕು. ಅವರಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರದ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಹುಬ್ಬಳ್ಳಿ ಶಹರದಲ್ಲಿ ಯಾವುದೇ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ.
ನಿರ್ಬಂಧ ಮುಂದುವರಿಕೆ: ಜಿಲ್ಲೆಯಾದ್ಯಂತ ಈ ಚಟುವಟಿಕೆಗಳಿಗೆ ವಿಧಿಸಿರುವ ನಿರ್ಬಂಧ ಮುಂದುವರೆಯಲಿದೆ. ಎಲ್ಲಾ ಶಿಕ್ಷಣ ತರಬೇತಿ, ಕೋಚಿಂಗ್ ಕ್ಲಾಸ್‍ಗಳು ತೆರೆಯಲು ಅವಕಾಶವಿಲ್ಲ. ಆಟೋ, ಸೈಕಲ್ ರಿಕ್ಷಾ ಸೇರಿದಂತೆ ಟ್ಯಾಕ್ಸಿ, ಕ್ಯಾಬ್ ಸೇವೆಗಳು ಇಲ್ಲ. ಸಿನಿಮಾ ಮಂದಿರ, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಈಜುಕೊಳ, ಮನರಂಜನಾ ಪಾರ್ಕ್, ಪಿವಿಆರ್, ಬಾರ್ಗಳು, ಸಭಾಂಗಣಗಳಲ್ಲಿ ಚಟುವಟಿಕೆಗಳಿಗೆ ನಿರ್ಬಂಧ ಮುಂದುವರೆಯಲಿದೆ.
ಎಲ್ಲಾ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಮುಂದುವರೆಯಲಿದೆ. ಎಲ್ಲಾ ಧರ್ಮಗಳ ಪ್ರಾರ್ಥನಾ ಮಂದಿರಗಳಲ್ಲಿ ಅದರ ಅನುಯಾಯಿಗಳು ಸೇರುವುದನ್ನು ನಿರ್ಬಂಧಿಸಲಾಗಿದೆ. ಎಲ್ಲಾ ಮಾರ್ಕೆಟ್ ಕಾಂಪ್ಲೆಕ್ಸ್ಗಳು, ಮಲ್ಟಿ ಬ್ರ್ಯಾಂಡ್ ಹಾಗೂ ಸಿಂಗಲ್ ಬ್ರ್ಯಾಂಡ್‍ಗಳ ಮಾಲ್‍ಗಳು ಮುಚ್ಚಿರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.