ಕರ್ನಾಟಕ

karnataka

ETV Bharat / state

ದೇಶಾದ್ಯಂತ 16 ದಿನ 5000 ಕಿ.ಮೀ ಕಾರು ಚಾಲನೆ : ಬೇಟಿ ಪಡಾವೋ, ಬೇಟಿ ಬಚಾವೋ ಜಾಗೃತಿ.. ಹುಬ್ಬಳ್ಳಿಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾಧನೆ - ಶಾಂಭವಿ ಸಾಲಿಮಠ

ಹುಬ್ಬಳ್ಳಿಯ ಇಂಜಿನಿಯರಿಂಗ್​ ವಿದ್ಯಾರ್ಥಿನಿ ಶಾಂಭವಿ ಸಾಲಿಮಠ ದೇಶಾದ್ಯಂತ ಸಂಚರಿಸಿ ಕಾರಿನಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಮತ್ತು ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.

engineering-student-drive-car-across-the-country-for-beti-padao-beti-bachav-awareness
ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾಧನೆ : 16 ದಿನ 5000 ಕಿ.ಮೀ ದೇಶಾದ್ಯಂತ ಕಾರು ಡ್ರೈವ್ : ಬೇಟಿ ಪಡಾವೋ, ಬೇಟಿ ಬಚಾವ್ ಜಾಗೃತಿ

By ETV Bharat Karnataka Team

Published : Oct 15, 2023, 7:38 AM IST

Updated : Oct 15, 2023, 8:22 AM IST

ಹುಬ್ಬಳ್ಳಿಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾಧನೆ

ಹುಬ್ಬಳ್ಳಿ : ನಗರದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಕಾರಿನಲ್ಲಿ ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ದೇಶದ ಉದ್ದಗಲಕ್ಕೂ ಸಂಚರಿಸಿದ ವಿದ್ಯಾರ್ಥಿನಿ ಶಾಂಭವಿ ಸಾಲಿಮಠ, ಬೇಟಿ ಪಢಾವೋ, ಬೇಟಿ ಬಚಾವೋ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ ಕೈಗೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಶಾಂಭವಿ ಸಾಲಿಮಠ ಅವರು ಗೋಕುಲರಸ್ತೆಯ ರಾಧಾಕೃಷ್ಣ ನಗರದ ನಿವಾಸಿಯಾಗಿದ್ದಾರೆ. ಕೆ.ಎಲ್.ಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೊದಲ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕಳೆದ ಸೆ.25ರಂದು ಗೋಕುಲರಸ್ತೆಯ ಕೆ.ಎಲ್.ಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆವರಣದಿಂದ ತಮ್ಮ ಜಾಗೃತಿ ಯಾತ್ರೆಯನ್ನು ಆರಂಭಿಸಿದರು. ಇವರ ಯಾತ್ರೆಗೆ ಹುಬ್ಬಳ್ಳಿ ಉತ್ತರದ ರೋಟರಿ ಕ್ಲಬ್ ಸಹಕಾರ ನೀಡಿದೆ. ಇವರ ಸಹಕಾರದಿಂದ 16 ದಿನದ ಜಾಗೃತಿ ಅಭಿಯಾನ ನಡೆಸಿದ ಶಾಂಭವಿ ಅವರು ಆರು ರಾಜ್ಯಗಳಲ್ಲಿ ಸಂಚರಿಸಿ ಅ.3 ರಂದು ಪಂಜಾಬಿನ ಲೂಧಿಯಾನ ತಲುಪಿ ತಮ್ಮ ಯಾತ್ರೆಯನ್ನು ಮುಕ್ತಾಯಗೊಳಿಸಿದ್ದಾರೆ.

ಹುಬ್ಬಳ್ಳಿಯಿಂದ ದೂರದ ಪಂಜಾಬ್​​ವರೆಗಿನ 5000 ಸಾವಿರ ಕಿ.ಮೀ ದೂರವನ್ನು ಒಬ್ಬರೇ ಕಾರಿನಲ್ಲಿ ಸಂಚರಿಸಿದ್ದಾರೆ. ದಾರಿಯುದ್ದಕ್ಕೂ 16ಕ್ಕೂ ಹೆಚ್ಚು ಚರ್ಚಾಕೂಟ, ಸಭೆಗಳನ್ನು ನಡೆಸಿ ಬೇಟಿ ಪಢಾವೋ, ಬೇಟಿ ಬಚಾವೋ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ಈ ಮೂಲಕ ತಮ್ಮ ಪ್ರಯಾಣವನ್ನು ಅರ್ಥಪೂರ್ಣವಾಗಿ ಪೂರೈಸಿ, ಮಹಿಳಾ ಸಬಲೀಕರಣದ ಮಹತ್ವವನ್ನು ಜನರಿಗೆ ತಿಳಿಸಿದ್ದಾರೆ. ಈ ಮೂಲಕ ಇತರ ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ ಮೂಡಿಸಲು ಕೆಲಸ ಮಾಡಿದ್ದಾರೆ ಎಂದು ರೋಟರಿ ಕ್ಲಬ್‌ ಹುಬ್ಬಳ್ಳಿ ಉತ್ತರದ ಅಧ್ಯಕ್ಷ ಡಾ.ನಾಗರಾಜ ಶೆಟ್ಟಿ ತಿಳಿಸಿದರು.

ತಮ್ಮ 16 ದಿನಗಳ ಸುದೀರ್ಘ ಪ್ರಯಾಣದ ಕುರಿತು ಹಂಚಿಕೊಂಡ ಶಾಂಭವಿ ಸಾಲಿಮಠ, ಪ್ರವಾಸದ ಮೊದಲು ಮಾನಸಿಕವಾಗಿ ಸಿದ್ದಳಾದೆ. ಬಳಿಕ ರೋಟರಿಯವರ ಮಾರ್ಗದರ್ಶನದಲ್ಲಿ ನಾನಾ ಕಡೆಗಳಲ್ಲಿ ರೋಟರಿ ಸಮಾವೇಶಗಳಲ್ಲಿ ಭಾಗವಹಿಸಿ, ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದೇನೆ. ಇದು ನನ್ನ ಜೀವನದಲ್ಲಿ ಮರೆಯಲಾಗದ ಅನುಭವ ನೀಡಿದೆ. ಪ್ರಯಾಣದ ಉದ್ದಕ್ಕೂ ವಿವಿಧ ರಾಜ್ಯದ ಜನರ ಭಾಷೆ, ಸಂಸ್ಕೃತಿಯ ಬಗ್ಗೆ ತಿಳಿದುಕೊಂಡೆ. ಇಂತಹ ಸವಾಲಿನ ಪ್ರಯಾಣವನ್ನು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಕೈಗೊಳ್ಳುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದರು.

ಕೆ.ಎಲ್.ಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡೀನ್ ಡಾ. ಮನು ಮಾತನಾಡಿ, ಸಾಹಸ ಮತ್ತು ಅರಿವು ಕಾರ್ಯಕ್ರಮಕ್ಕೆ ಕೆ.ಎಲ್.ಇ ಸಂಸ್ಥೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಶಾಂಭವಿ, ಈ ರೀತಿಯ ಪ್ರವಾಸ ಕೈಗೊಳ್ಳುವುದಾಗಿ ಹೇಳಿದಾಗ ಸಂಸ್ಥೆಯ ಒಪ್ಪಿಗೆ ಮೇರೆಗೆ ಕಳಿಸಿಕೊಡಲಾಯಿತು. ಮಾನಸಿಕ ಆರೋಗ್ಯ, ಸ್ವಾಸ್ಥ್ಯ ಕಾಯ್ದುಕೊಳ್ಳಲು ಕುರಿತು ಅರಿವು ಆಂದೋಲನ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ :ಲಿಂಗಸೂಗೂರು: ಅ.15ರಿಂದ ರಂಭಾಪುರಿ ಶ್ರೀಗಳ ಶರನ್ನವರಾತ್ರಿ ದಸರಾ‌ ದರ್ಬಾರ್.. 10 ದಿನ ವಿವಿಧ ಕಾರ್ಯಕ್ರಮ

Last Updated : Oct 15, 2023, 8:22 AM IST

ABOUT THE AUTHOR

...view details