ಹುಬ್ಬಳ್ಳಿ: ನಿಷ್ಕ್ರಿಯವಾಗಿರುವ 104 ಆರೋಗ್ಯವಾಣಿಯನ್ನು ಶೀಘ್ರ ಪುನಾರಂಭಿಸುವುದು ಮತ್ತೆ ಹಳೆಯ ಸಿಬ್ಬಂದಿಯ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು 104 ಆರೋಗ್ಯ ವಾಣಿ ಸಿಬ್ಬಂದಿ ಒತ್ತಾಯಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬೆರಳ ತುದಿಯಲ್ಲಿ ಆರೋಗ್ಯ ಸೇವೆ ದೊರೆಯಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರಾರಂಭವಾದ 104 ಆರೋಗ್ಯ ವಾಣಿ ಇದೀಗ ದಯನೀಯ ಸ್ಥಿತಿ ತಲುಪುವಂತಾಗಿದೆ. ಕಳೆದೆರಡು ತಿಂಗಳಿಂದ ಆರೋಗ್ಯವಾಣಿ ನಿಷ್ಕ್ರಿಯಗೊಂಡಿದೆ.
ಪರಿಣಾಮ ಪಿರಾಮಲ್ ಸ್ವಾಸ್ಥ್ಯ ಕಂಪನಿ 2022 ಫೆ.15ರಂದು ಗುತ್ತಿಗೆಯಿಂದ ಹೊರ ಬಂದಿದೆ. ಇದರಿಂದ ಆರೋಗ್ಯವಾಣಿಯ ಸುಮಾರು 400ಕ್ಕೂ ಹೆಚ್ಚು ಸಿಬ್ಬಂದಿಯ ಭವಿಷ್ಯ ಅಡಕತ್ತರಿಗೆ ಸಿಲುಕಿದೆ. ಹುಬ್ಬಳ್ಳಿ, ಬೆಂಗಳೂರು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಕುಟುಂಬಗಳು ಬೀದಿಪಾಲಾಗುವ ಸ್ಥಿತಿ ಎದುರಾಗಿದೆ.