ಧಾರವಾಡ :ಸೆ.03 ರಂದು ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಮತದಾನ ನಡೆಯಲಿದ್ದು, ಈ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಈ ಬಾರಿ ಮತದಾನದ ಅವಧಿಯನ್ನು ಒಂದು ಗಂಟೆ ಕಾಲ ವಿಸ್ತರಿಸಲಾಗಿದೆ.
ಈ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದ್ದು, ಸೆ. 03 ರಂದು ನಡೆಯಲಿರುವ ಮತದಾನದ ಅವಧಿಯನ್ನು ಸಂಜೆ 5 ಗಂಟೆಯ ಬದಲಾಗಿ 6 ಗಂಟೆಯವರೆಗೆ ವಿಸ್ತರಿಸಿ ರಾಜ್ಯ ಚುನಾವಣಾ ಆಯೋಗವು ಆದೇಶಿಸಿದೆ ಎಂದು ತಿಳಿಸಿದರು.
ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ಮತದಾನ (ಸೆ.3) ದಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ಪ್ರಸ್ತುತ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಯನ್ವಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಚುನಾವಣೆ ನಡೆಸುವುದು ಅವಶ್ಯವಿದೆ. ಚುನಾವಣೆ ನಡೆಯಲಿರುವ ಎಲ್ಲಾ ಮತಗಟ್ಟೆಗಳಿಗೆ ಕೋವಿಡ್ ಮುಂಜಾಗ್ರತಾ ಪರಿಕರಗಳನ್ನೊಳಗೊಂಡ ಕೋವಿಡ್ ಸುರಕ್ಷತಾ ಕಿಟ್‍ಗಳನ್ನು ಜಿಲ್ಲಾಡಳಿತದ ಮೂಲಕ ಪೂರೈಸಲು ಆಯೋಗದಿಂದ ಕ್ರಮ ಕೈಗೊಳ್ಳಲಾಗಿದೆ.
ಭೌತಿಕ ಅಂತರ ಕಾಯ್ದುಕೊಂಡು ಹಾಗೂ ಮುಕ್ತವಾಗಿ ಮತದಾನ ನಡೆಸುವ ನಿಟ್ಟಿನಲ್ಲಿ ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಿದೆ. ಈ ಕುರಿತಂತೆ ಆ.23 ರಂದು ರಾಜ್ಯ ಚುನಾವಣಾ ಆಯೋಗ ಆದೇಶಿಸಿತ್ತು. ಇಂದು (ಆ.26) ಈ ಕುರಿತು ಅಧಿಕೃತ ಆದೇಶವನ್ನು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ನೀಡಿದ್ದು, ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಓದಿ: 3 ವರ್ಷ ಜಿಎಸ್ಟಿ ಪರಿಹಾರ ವಿಸ್ತರಿಸುವಂತೆ ನಿರ್ಮಲಾ ಸೀತಾರಾಮನ್ಗೆ ಸಿಎಂ ಮನವಿ