ಧಾರವಾಡ/ಬೆಂಗಳೂರು :ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಗೆ ಮತ ನೀಡಿ ಮತ್ತು ಪ್ರಧಾನಿ ನರೇಂದ್ರ ಮೋದಿಜಿಯವರ ಆಶೀರ್ವಾದಿಂದ ವಂಚಿತವಾಗದಂತೆ ನೋಡಿಕೊಳ್ಳಿ ಎಂದು ಸಾರ್ವಜನಿಕ ಹೇಳಿಕೆ ನೀಡಿ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧ ಹಾವೇರಿ ಜಿಲ್ಲೆಯ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ಹಾವೇರಿ ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಸಿಜೆಎಂ ನ್ಯಾಯಾಲಯದ ಮುಂದಿರುವ ವಿಚಾರಣೆ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಧಾರವಾಡ ಪೀಠದಿಂದ ಆನ್‌ಲೈನ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿದೆ.
ಪ್ರಮಾಣದ ಹಿನ್ನೆಲೆ:ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2023ರ ಏಪ್ರಿಲ್ 19ರಂದು ಮಧ್ಯಾಹ್ನ 1.15ರಿಂದ 1.50ರ ಅವಧಿಯಲ್ಲಿ ಶಿಗ್ಗಾವಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಜೆ.ಪಿ. ನಡ್ಡಾ ಮಾತನಾಡಿದ್ದರು. 'ಕರ್ನಾಟಕದ ಜನತೆ ಬಿಜೆಪಿಗೆ ಮತ ನೀಡಿ, ಪ್ರಧಾನಿ ನರೇಂದ್ರ ಮೋದಿಜಿ ಅವರ ಒಲವು ಪಡೆಯಿರಿ. ಕರ್ನಾಟಕವು ಮೋದಿಯವರ ಆಶೀರ್ವಾದ ಹೊಂದಿದೆ. ಅದರಿಂದ ವಂಚಿತವಾಗದಂತೆ ನೋಡಿಕೊಳ್ಳಿ’ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಚುನಾವಣಾಧಿಕಾರಿಯಾಗಿದ್ದ ಲಕ್ಷ್ಮಣ್ ನಂದಿ ಅವರು ಶಿಗ್ಗಾವಿ ಪೊಲೀಸ್ ಠಾಣೆಗೆ ದೂರು ನೀಡಿ, ಜೆ.ಪಿ. ನಡ್ಡಾ ಅವರು ಮತದಾರರ ಮೇಲೆ ಅನುಚಿತ ಪ್ರಭಾವ ಬೀರುವ ಮೂಲಕ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ದೂರು ಸ್ವೀಕರಿಸಿದ್ದ ಪೊಲೀಸರು, ನಡ್ಡಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 171(ಸಿ), 171(ಎಫ್) ಮತ್ತು ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 123(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ನಡ್ಡಾ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವಿನೋದ್ ಕುಮಾರ್ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ದಾಖಲಿಸಿರುವುದು ಅಸಂಜ್ಜೇಯ (ಗಂಭೀರ ಸ್ವರೂಪವಲ್ಲದ) ಪ್ರಕರಣವಾಗಿದೆ. ಇಂತಹ ಪ್ರಕರಣ ದಾಖಲಿಸುವಾಗ ದೂರುದಾರರೇ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ದೂರು ಸಲ್ಲಿಸಿ, ಎಫ್‌ಐಆರ್ ದಾಖಲಿಸಲು ಅನುಮತಿ ಪಡೆಯಬೇಕು. ಆದರೆ, ಈ ಪ್ರಕರಣದಲ್ಲಿ ಪೊಲೀಸರೇ ಮ್ಯಾಜಿಸ್ಟ್ರೇಟ್ ಮುಂದೆ ದೂರು ದಾಖಲಿಸಿ, ಅನುಮತಿ ಪಡೆದು ಎಫ್‌ಐಆರ್ ದಾಖಲಿಸಿದ್ದಾರೆ. ಇದು ಕಾನೂನುಬಾಹಿರ ಕ್ರಮ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅಲ್ಲದೆ, ಅರ್ಜಿದಾರರ ವಿರುದ್ಧ ಅನುಚಿತ ಪ್ರಭಾವ ಬೀರಿದ ಆರೋಪ ಮಾಡಲಾಗಿದೆ. ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗೆ ಚುನಾವಣಾ ಆಯೋಗವೇ ಅನುಮತಿ ನೀಡಿದೆ. ಮತ ಪ್ರಚಾರ ಮಾಡುವುದು ಅಭ್ಯರ್ಥಿಯ ಹಕ್ಕು ಆಗಿರುತ್ತದೆ. ಅದರಂತೆ ಪ್ರಕರಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಅರ್ಜಿದಾರರು ಪ್ರಚಾರ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಮತದಾರರ ಮೇಲೆ ಅನುಚಿತ ಪ್ರಭಾವ ಬೀರಿದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧ ಎಫ್‌ಐಆರ್ ರದ್ದುಪಡಿಸಬೇಕು ಎಂದು ವಕೀಲ ವಿನೋದ್ ಕುಮಾರ್ ಕೋರಿದ್ದರು. ಈ ವಾದ ಪರಿಗಣಿಸಿದ ಹೈಕೋರ್ಟ್, ನಡ್ಡಾ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿ ನವೆಂಬರ್ 3ಕ್ಕೆ ವಿಚಾರಣೆ ಮುಂದೂಡಿದೆ.
ವಕೀಲರು ಹೇಳಿದ್ದೇನು?:ಪ್ರಕರಣದ ಬಗ್ಗೆ ವಕೀಲ ವಿನೋದ ಕುಮಾರ್ ಮಾತನಾಡಿ, ಜೆ.ಪಿ.ನಡ್ಡಾ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ, ಮೋದಿಯವರ ಆಶೀರ್ವಾದ ಇದ್ದರೆ ಅಭಿವೃದ್ಧಿ ಚೆನ್ನಾಗಿ ನಡೆಯುತ್ತೆ. ಅವರ ಆಶೀರ್ವಾದದಿಂದ ವಂಚಿತರಾಗಬೇಡಿ. ಅದಕ್ಕೋಸ್ಕರ ಬಿಜೆಪಿಗೆ ವೋಟು ಕೊಡಿ ಎಂದಿದ್ದರು. ಇದು ಮತದಾರರಿಗೆ ಒಡ್ಡಿದ ಆಮಿಷ ಎಂದು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ 171 ಸಿ ಹಾಗೂ 171 ಎಫ್ ಮತ್ತು 123 ರೆಪ್ರರೆಂಟೇಷನ್ ಆಫ್ ಪೀಪಲ್ ಆ್ಯಕ್ಟ್ ಮೂಲಕ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ರದ್ದುಪಡಿಸಬೇಕು ಎಂದು ನಾವು ಉಚ್ಛ ನ್ಯಾಯಾಲಯದಲ್ಲಿ ಮನವಿ ಮಾಡಿದ್ದೆವು ಎಂದರು.
ಈ ಹೇಳಿಕೆಯಲ್ಲಿ ಯಾವುದೇ ರೀತಿಯ ಆಮಿಷ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಮತ ಕೇಳುವುದು ನಮ್ಮ ಹಕ್ಕು. ಅದೇ ರೀತಿ ಅವರು ಮತ ಕೇಳಿದ್ದಾರೆ. ಎಫ್‌ಐಆರ್ ದಾಖಲಾತಿಗೆ ಮ್ಯಾಜಿಸ್ಟ್ರೇಟ್ರಿಂದ ಅನುಮತಿ ಬೇಕು. ಆ ಅನುಮತಿಗೆ ಅದರದ್ದೇ ಆದ ವಿಧಾನಗಳಿವೆ. ಈ ವಿಧಾನವನ್ನು ಬಿಟ್ಟು ಪೊಲೀಸರೇ ಹೋಗಿ ಮ್ಯಾಜಿಸ್ಟ್ರೇಟ್ರಿಂದ ಪರ್ಮಿಷನ್ ತೆಗೆದುಕೊಂಡು ಬಂದಿದ್ದಾರೆ. ಆ ಪರ್ಮಿಷನ್ ಅನ್ನು ಯಾರು ದೂರು ಕೊಡುತ್ತಾರೋ ಅವರು ತೆಗೆದುಕೊಂಡು ಬರಬೇಕು ಅಂತ ಕಾನೂನಿದೆ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದೆವು. ಲಕ್ಷ್ಮಣ ನಂದಿ ಎನ್ನುವವರು ದೂರು ಕೊಟ್ಟಿದ್ದರು. ಇವತ್ತು ನಮ್ಮ ವಾದ ಆಲಿಸಿದ ಜಸ್ಟಿಸ್ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತನಿಖೆಗೆ ಮಧ್ಯಂತರ ತಡೆ ನೀಡಿದೆ ಎಂದು ವಕೀಲ ವಿನೋದ ಕುಮಾರ್ ತಿಳಿಸಿದರು.
ಇದನ್ನೂ ಓದಿ:ಒಡೆದು ಆಳುವ ನೀತಿ ಅನುಸರಿಸಿದ್ದ ಯುಪಿಎ ಸರ್ಕಾರ: ಜೆ ಪಿ ನಡ್ಡಾ ಆರೋಪ