ಧಾರವಾಡ: ಶಿಕ್ಷಣ ಕಾಶಿ ಎಂದು ಹೆಸರುವಾಸಿಯಾದ ಧಾರವಾಡಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಲಿದೆ. ಈಗಾಗಲೇ ಮೂರು ವಿಶ್ವವಿದ್ಯಾಲಯ ಹೊಂದಿರುವ ಇನ್ನೊಂದು ವಿವಿ ಸ್ಥಾಪನೆಯಾಗಲಿದೆ. ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಕಾನೂನು ಮಹಾವಿದ್ಯಾಲಯ ಹೊಂದಿರುವ ಧಾರವಾಡಕ್ಕೆ ಇದೀಗ ವಿಧಿವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ಕೂಡ ಬಂದಿದೆ. ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಥಳ ಪರಿಶೀಲನೆ ಕೂಡ ನಡೆಸಿದ್ದಾರೆ.
ಐಐಟಿ, ಐಐಐಟಿಯನ್ನು ಸಹ ಹೊಂದಿರುವ ವಿದ್ಯಾಕಾಶಿ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ತಿಂಗಳು 28 ರಂದು ಶಂಕುಸ್ಥಾಪನೆ ನೇರ ವೇರಿಸಲಿದ್ದಾರೆ. ಗುಜರಾತಿನಲ್ಲಿ ಫಾರೆನ್ಸಿಕ್ ಯುನಿವರ್ಸಿಟಿ ಇದ್ದು, ದಕ್ಷಿಣ ಭಾರತದ ಮೊದಲ ಫಾರೆನ್ಸಿಕ್ ಕ್ಯಾಂಪಸ್ ಇದಾಗಿರಲಿದೆ.
ಧಾರವಾಡದಲ್ಲಿ ಗುಜರಾತ್ ಮಾದರಿಯ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಸ್ಥಳ ಅಂತಿಮಗೊಂಡಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅಥವಾ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಸೈದಾಪುರ ಗ್ರಾಮದ ಒಟ್ಟು 50 ಎಕರೆ 39 ಗುಂಟೆ ಜಾಗದಲ್ಲಿ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಜಾಗ ಗುರುತಿಸಿ ಅದೇ ಜಾಗವನ್ನು ಇದೀಗ ಫೈನಲ್ ಮಾಡಲಾಗಿದೆ.
ಇದಕ್ಕೆ ಜನವರಿ 28 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಡಿಗಲ್ಲು ನೆರವೇರಿಸಲಿದ್ದಾರೆ. ಕೃಷಿ ವಿಶ್ವವಿದ್ಯಾಲಯಕ್ಕೆ ಒಳಪಡುವ ಸೈದಾಪುರ ಗ್ರಾಮದ ಜಮೀನು ವಿಧಿ ವಿಜ್ಞಾನ ಪ್ರಯೋಗಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಯೋಗ್ಯವಾಗಿದ್ದು, ಇದೇ ಜಾಗವನ್ನು ಅಂತಿಮಗೊಳಿಸಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.