ಹುಬ್ಬಳ್ಳಿ:ಉಚಿತ ಆನ್‌ಲೈನ್ ವೈದ್ಯಕೀಯ ಸಲಹೆ ಪಡೆದುಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಇ-ಸಂಜೀವಿನಿ ಬಳಕೆಗೆ ನಿರಾಸಕ್ತಿ ವ್ಯಕ್ತವಾಗುತ್ತಿದೆ. ಕೋವಿಡ್ ಸಮಯದಲ್ಲಿ ಜನರ ಅಂಗೈಯಲ್ಲಿ ತುರ್ತು ಆರೋಗ್ಯ ಸೇವೆ ಲಭಿಸಲಿ ಎಂಬ ಉದ್ದೇಶದಿಂದ 2019ರ ಡಿಸೆಂಬರ್‌ನಲ್ಲಿ ಇ- ಸಂಜೀವಿನಿ ಆನ್‌ಲೈನ್ ಉಚಿತ ಚಿಕಿತ್ಸೆಯ ಸೇವೆಯನ್ನು ಸರ್ಕಾರ ಪ್ರಾರಂಭಿಸಿತ್ತು. ಆದರೆ, ಯೋಜನೆಯ ಲಾಭ ಪಡೆಯುವಲ್ಲಿ ಜನ ಹಿಂದೆ ಬಿದ್ದಿದ್ದಾರೆ.
ಜೂನ್ 15ರವರೆಗಿನ ಅಂಕಿ ಅಂಶಗಳ ಪ್ರಕಾರ, ಇ-ಸಂಜೀವಿನಿಯ ಆ್ಯಪ್ ಮೂಲಕ ರಾಜ್ಯದ 10, 46,820 ಜನರು ಸೇವೆ ಪಡೆದುಕೊಂಡಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಜನರಿಗೆ ಆ್ಯಪ್ ಮೂಲಕ ಆನ್‌ಲೈನ್ ವೈದ್ಯಕೀಯ ಸೇವೆ ಒದಗಿಸುತ್ತಿದ್ದಾರೆ. ಆದರೆ, ಹೆಚ್ಚಿನ ಜನರು ಸೇವೆಯ ನೇರ ಲಾಭ ಪಡೆಯಲು ಮುಂದಾಗಿಲ್ಲ.