ಹುಬ್ಬಳ್ಳಿ:ಹುಬ್ಬಳ್ಳಿ -ಧಾರವಾಡ ಅವಳಿ ನಗರಗಳು ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಲೇ ಸಾಗುತ್ತಿವೆ. ಅದರಂತೆ ಆಸ್ತಿ ಖರೀದಿ ಹಾಗೂ ಮಾರಾಟ ಪ್ರಕ್ರಿಯೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ತಮ್ಮ ಆಸ್ತಿಗೆ ತಾನೇ ವಾರಸುದಾರರು ಎಂಬ ಸರ್ಟಿಫಿಕೆಟ್ ಪಡೆಯಲು ಮನೆ ಹಾಗೂ ನಿವೇಶನ ಮಾಲೀಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಾರದರ್ಶಕತೆ ಹಾಗೂ ವಂಚನೆ ತಪ್ಪಿಸಲು ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಇ-ಸ್ವತ್ತು (ಇ-ಆಸ್ತಿ ) ಕಡ್ಡಾಯ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಒಂದೆಡೆ ಮಹಾನಗರ ಪಾಲಿಕೆ ವಿಳಂಬ ಧೋರಣೆ, ಮತ್ತೊಂದೆಡೆ ಸರ್ವರ್ ಸಮಸ್ಯೆಯಿಂದ ಸಬ್ರಿಜಿಸ್ಟ್ರಾರ್ ಕಚೇರಿಯ ಸಿಬ್ಬಂದಿ, ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇ ಆಸ್ತಿ ಅಥವಾ ಇ ಸ್ವತ್ತು ಪ್ರಮಾಣ ಪತ್ರ ಕಡ್ಡಾಯ ಮಾಡಿರುವ ಸಂಬಂಧ ಅಧಿಕಾರಿಗಳು ರಾತ್ರೋ ರಾತ್ರಿ ಕೈಗೊಂಡ ದಿಢೀರ್ ನಿರ್ಧಾರದ ಪರಿಣಾಮ ಜನರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ.
ಇ ಸ್ವತ್ತುಗೆ ಅಲೆದಾಡಿ ಜನ ಸುಸ್ತು ಸುಸ್ತು: ಇ ಸ್ವತ್ತು ಪ್ರಮಾಣಪತ್ರ ಇದ್ದವರಿಗೆ ಮಾತ್ರ ಆಸ್ತಿ ನೋಂದಣಿ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಆದೇಶ ನೀಡಿದ ಮಾರನೇ ದಿನ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಆದ್ರೆ ಸರ್ವರ್ ಸಮಸ್ಯೆಯಿಂದ ಆಸ್ತಿ ನೋಂದಣಿ ಹಾಗೂ ಇತರ ಕೆಲಸಗಳು ವಿಳಂಬ ಆಗುತ್ತಿವೆ. ಬ್ಯಾಂಕ್ ಲೋನ್‌ಗಾಗಿ ಆಸ್ತಿ ಮೇಲೆ ಭೋಜಾ ಕೂಡಿಸಲು, ಭೋಜಾ ಹೆಸರು ಕಡಿಮೆ ಮಾಡಿಸಲು ಹೀಗೆ ಹಲವಾರು ರೀತಿಯ ನೋಂದಣಿ ಪ್ರಕ್ರಿಯೆಗಳು ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ನಿತ್ಯವೂ ನಡೆಯುತ್ತ ಇರುತ್ತವೆ. ಭೋಜಾ ಕೂಡಿಸಲು, ಕಡಿಮೆ ಮಾಡಲು ಇ ಆಸ್ತಿ ಅವಶ್ಯಕತೆ ಇಲ್ಲ ಎಂದು ಕೆಲವರು ಹೇಳುತ್ತಾರೆ. ಅದಕ್ಕೂ ಪ್ರಮಾಣಪತ್ರ ಕೇಳುತ್ತಿರುವುದು ಜನರಲ್ಲಿ ತಲೆನೋವಾಗಿ ಪರಿಣಮಿಸಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಲಯ ಕಚೇರಿಗಳಲ್ಲಿ ಇ ಸ್ವತ್ತಿಗಾಗಿ ಬಹಳಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೂ ಪ್ರಮಾಣ ಪತ್ರ ಲಭಿಸಿಲ್ಲ. ಇಂಥ ನೂರಾರು ಜನರು ಅರ್ಜಿ ಸಲ್ಲಿಸಿ ತಿಂಗಳುಗಳಾಗಿವೆ. ಪ್ರಮಾಣ ಪತ್ರಕ್ಕೆ ಅಲೆದಾಡಿ ಸಾಕಾಗಿ ಕೈ ಚೆಲ್ಲಿ ಕುಳಿತಿದ್ದಾರೆ.