ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ರಸ್ತೆ ಕಾಮಗಾರಿ ವಿಳಂಬವಾಗಿ, ಇಲ್ಲಿಯ ರಸ್ತೆಗಳು ಧೂಳುಮಯವಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಹುಬ್ಬಳ್ಳಿಯ ಬಹುತೇಕ ಕಡೆಯಲ್ಲಿ ರಸ್ತೆಗಳೆಲ್ಲವೂ ಧೂಳಿನಿಂದ ಕೂಡಿವೆ. ಜನರು ಅಸ್ತಮಾ ಹಾಗೂ ಇನ್ನಿತರ ಶ್ವಾಸಕೋಶದ ಸಮಸ್ಯೆಗಳಿಗೂ ತುತ್ತಾಗುತ್ತಿದ್ದಾರೆ.
"ಕೋವಿಡ್ಗೆ ಹೆದರಿ ಮಾಸ್ಕ್ ಹಾಕುವ ಬದಲಿಗೆ ಧೂಳಿಗೆ ಹೆದರಿಕೊಂಡು ಮಾಸ್ಕ್ ಧರಿಸುವಂತಹ ಸ್ಥಿತಿ ಇದೆ. ಹೀಗಿದ್ದರೂ ಪಾಲಿಕೆಯಾಗಲಿ, ಜನಪ್ರತಿನಿಧಿಗಳಾಗಲಿ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಆದರೆ ಪಾಲಿಕೆ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಧೂಳುಮುಕ್ತ ರಸ್ತೆ ಮಾಡಲು ಮಷೀನ್‌ಗಳನ್ನು ಖರೀದಿಸುತ್ತಿದ್ದೇವೆ ಎನ್ನುತ್ತಾರೆ" ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದರು.
ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಪ್ರತಿಕ್ರಿಯಿಸಿ, "ಧೂಳಿನಿಂದ ಮಾರಕ ಖಾಯಿಲೆಗಳು ಬರುವ ಸಂಭವವಿದೆ. ಇದಕ್ಕಾಗಿ ಮಹಾನಗರ ಪಾಲಿಕೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಧೂಳು ಹಾಗೂ ವಾಯುಮಾಲಿನ್ಯ ಕಡಿಮೆ ಮಾಡಲು ಪಾಲಿಕೆ ಎನ್ ಕ್ಯಾಪ್ ಯೋಜನೆ ಅಡಿ ಎರಡು ಮಷೀನ್ ಖರೀದಿಸಲು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಂದು ಮಷೀನ್ ಬೆಲೆ 1 ಕೋಟಿ 40 ಲಕ್ಷ ರೂ ಇದ್ದು ಎರಡು ಮಷೀನ್ ಖರೀದಿಗಾಗಿ ಟೆಂಡರ್ ಕರೆಯಲಾಗಿದೆ. ಅದರೊಂದಿಗೆ 3 ವರ್ಷದ ನಿರ್ವಹಣಾ ವೆಚ್ಚವೂ ಸೇರಿದೆ" ಎಂದು ಮಾಹಿತಿ ನೀಡಿದರು.