ಹುಬ್ಬಳ್ಳಿ: ವಾರ್ಡ್ ನಂಬರ್ 65 ರ ಅಲ್ತಾಪ್ ನಗರದಲ್ಲಿ ಕಳೆದ ಆರು ತಿಂಗಳಿನಿಂದ ಒಳಚರಂಡಿ ವ್ಯವಸ್ಥೆ ಮಾಡದೇ ಇರುವುದರಿಂದ ಇಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚರಂಡಿ ಒಳಗೆ ಹರಿಯಬೇಕಿದ್ದ ನೀರು ಮನೆಯ ಒಳಗೆ ಮತ್ತು ಕುಡಿಯುವ ನೀರಿನ ಟ್ಯಾಂಕ್ ಒಳಗೆ ನುಗ್ಗುತ್ತಿದೆ. ಇಂತಹ ನೀರು ಕುಡಿದರೆ ನಮ್ಮ ಆರೋಗ್ಯ ಏನಾಗಬಾರದು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಅವ್ಯವಸ್ಥೆಯಿಂದ ಕೂಡಿದ ಒಳಚರಂಡಿ: ಬೀದಿಗಿಳಿದು ಹೋರಾಟಕ್ಕೆನಿಂತ ಸ್ಥಳೀಯರು - Drainage system
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದಲ್ಲಾ ಒಂದು ಸಮಸ್ಯೆ ಉದ್ಭವವಾಗುತ್ತಿದೆ. ನಗರದ ನಿವಾಸಿಗಳಿಗೆ ಉತ್ತಮ ಒಳ ಚರಂಡಿ ವ್ಯವಸ್ಥೆ ಮಾಡಬೇಕಿದ್ದ ಪಾಲಿಕೆ, ನಿರ್ಲಕ್ಷ್ಯ ವಹಿಸಿದ್ದರಿಂದ ಇಂದು ಸ್ಥಳೀಯರು ಬೀದಿಗಿಳಿದು ಹೋರಾಟ ಮಾಡುವ ಪ್ರಸಂಗ ಬಂದೊದಗಿದೆ.
ಈ ಸಮಸ್ಯೆ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅದಕ್ಕೆ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆ ಮತ್ತು ಪಾಲಿಕೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸ್ವಚ್ಛತೆ ಬಗ್ಗೆ ಮಾತನಾಡಿದ ಮಾಜಿ ಪಾಲಿಕೆ ಸದಸ್ಯ, ನಗರದಲಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪಾಲಿಕೆ ವಿಫಲವಾಗಿದೆ. ಇಂತಹ ಅವ್ಯವಸ್ಥೆಯಲ್ಲಿ ಜೀವನ ನಡೆಸುತ್ತಿರುವ ಇವರಿಗೆ ಕೊರೊನಾ ಎಂಬ ಮಹಾಮಾರಿಗಿಂತ ಇತರ ರೋಗಗಳು ಬರುವ ಸಾಧ್ಯತೆ ಹೆಚ್ಚಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಚರಂಡಿ ವ್ಯವಸ್ಥೆ ಕಲ್ಪಿಸಿದೇ ಹೋದರೆ ಮುಂದಿನ ದಿನಗಳಲ್ಲಿ ಸ್ಥಳೀಯರು ಸೇರಿಕೊಂಡು ಪಾಲಿಕೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.