ಕರ್ನಾಟಕ

karnataka

ETV Bharat / state

ನಟ ಪುನೀತ್ ರಾಜ್​​ಕುಮಾರ್ ನಿಧನಕ್ಕೆ ಡಾ. ವೀರೇಂದ್ರ ಹೆಗ್ಡೆ, ಸುತ್ತೂರು ಶ್ರೀಗಳಿಂದ ಸಂತಾಪ.. - virendra Hegde condolence about punith rajkumar death

ಪುನೀತ್ ರಾಜ್‍ಕುಮಾರ್ ಒಬ್ಬ ಪ್ರತಿಭಾನ್ವಿತ ನಟ ಎಂದ ಶ್ರೀಗಳು, 80ರ ದಶಕದಲ್ಲಿ ಡಾ.ರಾಜ್ ಕುಮಾರ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಮಠ ಏರ್ಪಡಿಸಿತ್ತು. ಆ ಸಂದರ್ಭದಲ್ಲಿ ಚಿಕ್ಕವನಿದ್ದ ಪುನೀತ್ ತಂದೆ-ತಾಯಿಗಳ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದ. ಆ ಸಂದರ್ಭದಲ್ಲಿ ಮಠದ ಸೋಫಾ ಏರುವುದು, ಇಳಿಯುವುದು ಮಾಡುತ್ತಿದ್ದ..

dr-virendra-hegde
ಡಾ. ವೀರೇಂದ್ರ ಹೆಗ್ಡೆ

By

Published : Oct 29, 2021, 9:32 PM IST

ಹುಬ್ಬಳ್ಳಿ :ನಟ ಪುನೀತ್ ರಾಜ್​ಕುಮಾರ್​ ಅಗಲಿಕೆಗೆ ಧರ್ಮಸ್ಥಳದ ಧರ್ಮಾಧಿಕಾರಿ‌ ಡಾ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.

ಡಾ. ರಾಜ್​ಕುಮಾರ್ ಕುಟುಂಬ ಮಂಜುನಾಥ ಸ್ವಾಮಿಯ ಭಕ್ತರಾಗಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಆಗಾಗ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದರು. ಅವರ ಅಗಲಿಕೆ ಸಾಕಷ್ಟು ನೋವನ್ನು ತಂದಿದೆ.

ಪುನೀತ್‌ ಅಗಲಿಕೆಗೆ ಡಾ. ವೀರೇಂದ್ರ ಹೆಗ್ಗಡೆ ಸಂತಾಪ..

ಉತ್ತಮ ನಟನೆ ಹಾಗೂ ಸಾರ್ವಜನಿಕರ ಜೊತೆ ಉತ್ತಮ‌ ಬಾಂಧವ್ಯ ಹೊಂದಿದ್ದ ಪುನೀತ್ ರಾಜ್​ಕುಮಾರ್​ ಆತ್ಮಕ್ಕೆ ಮಂಜುನಾಥ ಸ್ವಾಮಿ ಶಾಂತಿ ಕರುಣಿಸಲಿ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ‌ನೀಡಲಿ ಎಂದು ಪ್ರಾರ್ಥಿಸಿದರು.

ಸುತ್ತೂರು ಶ್ರೀಗಳು ಸಂತಾಪ

ನಟ ಪುನೀತ್ ಚಿಕ್ಕವಯಸ್ಸಿನಲ್ಲೇ ಬಹುಮುಖ ವ್ಯಕ್ತಿತ್ವ ರೂಪಿಸಿಕೊಂಡವರು. ಇವರ ಸಾವು ವಿಷಾದನೀಯ ಹಾಗೂ ಆಶ್ಚರ್ಯದ ಸಂಗತಿ ಎಂದು ಸುತ್ತೂರು ಶ್ರೀಗಳು ಸಂತಾಪ ಸೂಚಿಸಿದ್ದಾರೆ.

ಮಠದಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಅವರು, ನಟ ಪುನೀತ್ ಅವರು ಬಹುಮುಖ ವ್ಯಕ್ತಿತ್ವದ ನಟ. ಅವರ ಸಾವು ದುರದೃಷ್ಟಕರವಾಗಿದೆ. ಮೊನ್ನೆ ಆತನ ಸಹೋದರರ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದನ್ನು ಪತ್ರಿಕೆಗಳಲ್ಲಿ ನೋಡಿ, ಮರೆಯುವ ಮುನ್ನವೇ ಭೌತಿಕವಾಗಿ ನಮ್ಮನ್ನು ಅಗಲಿರುವುದು ಆಶ್ಚರ್ಯದ ಸಂಗತಿ.

ಪುನೀತ್ ರಾಜ್‍ಕುಮಾರ್ ಒಬ್ಬ ಪ್ರತಿಭಾನ್ವಿತ ನಟ ಎಂದ ಶ್ರೀಗಳು, 80ರ ದಶಕದಲ್ಲಿ ಡಾ.ರಾಜ್ ಕುಮಾರ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಮಠ ಏರ್ಪಡಿಸಿತ್ತು. ಆ ಸಂದರ್ಭದಲ್ಲಿ ಚಿಕ್ಕವನಿದ್ದ ಪುನೀತ್ ತಂದೆ-ತಾಯಿಗಳ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದ. ಆ ಸಂದರ್ಭದಲ್ಲಿ ಮಠದ ಸೋಫಾ ಏರುವುದು, ಇಳಿಯುವುದು ಮಾಡುತ್ತಿದ್ದ.

ಆ ಸಂದರ್ಭದಲ್ಲಿ ಪಾರ್ವತಮ್ಮನವರು ಪುನೀತ್ ರಾಜ್‍ಕುಮಾರ್ ಅವರನ್ನು ಕಂಟ್ರೋಲ್ ಮಾಡಲು ತುಂಬಾ ಕಷ್ಟಪಡುತ್ತಿದ್ದರು. ಆ ಸಂದರ್ಭದಲ್ಲಿ ಹಿರಿಯ ಶ್ರೀಗಳು ತುಂಬಾ ಆ್ಯಕ್ಟೀವ್ ಇದ್ದಾನೆ. ಆಟ ಆಡಲಿ ಎಂದು ಹೇಳಿದರು. ಆ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಸುತ್ತೂರು ಶ್ರೀಗಳು ಹಳೆಯ ಘಟನೆಯನ್ನು ವಿವರಿಸಿದರು.

ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು

ಪುನೀತ್ ದೊಡ್ಡ ಕಲಾವಿದನಾದರೂ ತಂದೆಯಂತೆ ನಯ, ವಿನಯ, ಸದ್ಗುಣಗಳನ್ನು ಬೆಳೆಸಿಕೊಂಡಿದ್ದರು. ನಾನು ದುಬೈ ಕಾರ್ಯಕ್ರಮವೊಂದಕ್ಕೆ ಹೋಗಿ ಬಂದು ಏರ್ಪೋರ್ಟ್​ನಲ್ಲಿ ಇಳಿದಾಗ, ಕಾಲಿಗೆ ನಮಸ್ಕರಿಸಿದರು. ಆಗ ಯಾರು ಎಂದು ನೋಡಿದಾಗ ಪುನೀತ್ ರಾಜ್‍ಕುಮಾರ್. ಅವರಿಗೆ ಮಠದ ಬಗ್ಗೆ ಅಪಾರ ಗೌರವ ಇತ್ತು ಎಂದು ನೆನಪಿಸಿಕೊಂಡರು.

ಖಾಸಗಿ ವಾಹಿನಿಯಲ್ಲಿ ಅಮಿತಾಬ್ ಬಚ್ಚನ್ ಅವರಂತೆ ಕನ್ನಡದಲ್ಲಿ ಕೋಟ್ಯಧಿಪತಿ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ನಡೆಸಿಕೊಡುತ್ತಿದ್ದರು. ಅವರು ವಿಷಯಗಳನ್ನು ಚೆನ್ನಾಗಿ ಅಧ್ಯಯನ ಮಾಡಿ ಗ್ರಹಿಸಿ ನಡೆಸಿಕೊಡುತ್ತಿದ್ದರು. ಬಹುಮುಖ ವ್ಯಕ್ತಿತ್ವದ ಪುನೀತ್ ಅಗಲಿಕೆ ದುರದೃಷ್ಟಕರ.

ಡಾ.ರಾಜ್ ಕುಟುಂಬದ ಒಂದು ಕುಡಿ ಇಲ್ಲದಂತಾಗಿದೆ.‌ ಭಗವಂತ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸುತ್ತೂರು ಶ್ರೀಗಳು ಇದೇ ಸಂದರ್ಭದಲ್ಲಿ ತಿಳಿಸಿದರು.

ಓದಿ:ಪುನೀತ್ ಕಂಠಕ್ಕೆ ಫಿದಾ ಆಗಿದ್ದ ಅಭಿಮಾನಿಗಳು : ಚಿಕ್ಕ ವಯಸ್ಸಿನಲ್ಲೇ ಸಿಂಗರ್ ಆಗಿದ್ದ ಅಪ್ಪು

For All Latest Updates

ABOUT THE AUTHOR

...view details