ಧಾರವಾಡ: ಲಾಕ್‌ಡೌನ್ ಹಿನ್ನೆಲೆ ಎಲ್ಲವೂ ಬಂದ್ ಆಗಿತ್ತು. ಆದರೆ, ರೈತರು ಜನರಿಗೆ ತೊಂದರೆಯಾಗದಂತೆ ಕೆಲ ನಿಯಮ ಸಡಲಿಕೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಹೋಗಬೇಕು ಎಂದು ಧಾರವಾಡದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಡಲಿಕೆ ದುರುಪಯೋಗ ಆಗಬಾರದು. ತರಕಾರಿ ಸಾಗಾಟಕ್ಕೆ ಎಲ್ಲ ರಾಜ್ಯದ ಗಡಿ ಮುಕ್ತ ಮಾಡಿದ್ದೇವೆ. ಕೇರಳ ಹೊರತು ಪಡಿಸಿ ಎಲ್ಲ ಗಡಿ ತೆರೆದಿದ್ದೇವೆ. ಈಗ ಯಾವುದೇ ತರಕಾರಿ ಸಾಗಾಟಕ್ಕೆ ನಿರ್ಬಂಧ ಇಲ್ಲ ಎಂದರು. ಈಗ ಮಳೆ ಚೆನ್ನಾಗಿ ಆಗಿದೆ. ರಾಜ್ಯದಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ಸಮಸ್ಯೆ ಇಲ್ಲ. ಎಲ್ಲ ಗೊಬ್ಬರ, ಔಷಧಿ ಅಂಗಡಿ ಆರಂಭ ಆಗಿವೆ. ಎಲ್ಲ ರೈತ ಸಂಪರ್ಕ ಕೇಂದ್ರ ತೆರೆದಿದ್ದೇವೆ. ಕೃಷಿ ಉಪಕರಣ ಅಂಗಡಿ ಸಹ ತೆರದಿವೆ. ಟ್ರ್ಯಾಕ್ಟರ್ ರಿಪೇರಿಗೆ ಕೆಲ ಗ್ಯಾರೇಜ್‌ಗಳ ಆರಂಭಕ್ಕೂ ಅನುವು ಮಾಡಿಕೊಡಲಾಗಿದೆ. ಇವತ್ತಿನಿಂದಲೇ ಅವಶ್ಯಕತೆಗೆ ತಕ್ಕಂತೆ ಗ್ಯಾರೇಜ್ ಆರಂಭ ಮಾಡಲಾಗುವುದು ಎಂದರು.