ಹುಬ್ಬಳ್ಳಿ:ಸೇನೆ ಸೇರಬೇಕು, ಸೈನಿಕನಾಗಿ ದೇಶ ಕಾಯ್ಬೇಕು ಅನ್ನೋದು ರಾಮಚಂದ್ರ ಕಾರಟಗಿ ಅವರು ಬಹುದೊಡ್ಡ ಕನಸಾಗಿತ್ತು .ಆದರೆ, ಆಗಿದ್ದು ವೈದ್ಯ. ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರಾದ ಡಾ. ರಾಮಚಂದ್ರ ಭಾರತೀಯ ಸೈನ್ಯ ಸೇರಬೇಕು ಎಂದು ಕನಸು ಕಂಡವರು. ಆದರೆ ಕಾಲಿನ ಸರ್ಜರಿ ಆದ ಕಾರಣ ಸೈನ್ಯ ಸೇರಲಾಗಲಿಲ್ಲ. ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸೇನೆ ಸೇರದಿದ್ದರೇನಂತೆ... ಸೈನಿಕರ ಸೇವೆ ಮಾಡಿದರಾಯ್ತು... ವೈದ್ಯನ ದೇಶ ಪ್ರೇಮ! - kannadanews
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಡಾ. ರಾಮಚಂದ್ರ ಕಾರಟಗಿ, ಸೈನಿಕರು ಮತ್ತು ಅವರ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೇವೆ ನೀಡುತ್ತಾ ಬಂದಿದ್ದು,ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸೈನಿಕರ ಕುಟುಂಬಕ್ಕೆ ತಮ್ಮ ಕ್ಲಿನಿಕ್ ನಲ್ಲಿ ಉಚಿತ ಚಿಕಿತ್ಸೆ ನೀಡುವುದಲ್ಲದೇ ಸೈನಿಕರ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಾರೆ. ಅಷ್ಟೇ ಅಲ್ಲ ನಗರದ ಬಹುತೇಕ ಮಾನಸಿಕ ರೋಗಿಗಳ ಮನೆ ಮನೆಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಾರೆ. ಅಲ್ಲದೇ ಪ್ರತಿ ಭಾನುವಾರ ಬಿಡುವು ಸಿಕ್ಕಾಗಲೆಲ್ಲ ನಗರದ ನಾನಾ ವೃದ್ಧಾಶ್ರಮಗಳಿಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಾರೆ. ಇದುವರೆಗೂ ಡಾಕ್ಟರ್ ರಾಮಚಂದ್ರ ಕಾರಟಗಿಯವರು 1,300 ಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ 350 ಕ್ಕೂ ಹೆಚ್ಚು ಉಚಿತ ಕ್ಯಾಂಪ್ ಗಳನ್ನ ಮಾಡಿ ಬಡಜನರಿಗೆ ವೈದಕೀಯ ಸೇವೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದುಡ್ಡು ಕೊಟ್ರೆ ಮಾತ್ರ ನಾವು ಚಿಕಿತ್ಸೆ ನೀಡೋದು ಅನ್ನೋ ವೈದ್ಯರಿರುವ ಈ ಕಾಲದಲ್ಲಿ, ಯೋಧರ ಕುಟುಂಬಕ್ಕೆ ಉಚಿತ ವೈದಕೀಯ ಚಿಕಿತ್ಸೆ ನೀಡುವ ಮೂಲಕ ರಾಮಚಂದ್ರ ಕಾರಟಗಿಯವರು ವೈದ್ಯರ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಸೇನೆಗೆ ಸೇರಲು ಆಗದಿದ್ದರೆ ಏನಂತೆ ಈ ಮೂಲಕ ದೇಶಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂಬ ಅವರ ಆತ್ಮತೃಪ್ತಿಗೆ ಸೆಲ್ಯೂಟ್ ಹೇಳಲೇಬೇಕು.