ಧಾರವಾಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ತಾಕತ್ತಿದ್ದರೆ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.
ನಿಮಗೆ ತಾಕತ್ ಇದ್ರೆ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಿ: ಡಿಕೆಶಿಗೆ ಈಶ್ವರಪ್ಪ ಸವಾಲ್ - ಕಾಂಗ್ರೆಸ್ ಮುಂದಿನ ಸಿಎಂ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯಾವಾಗಲೂ ಧಮ್ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನಿಜವಾಗಲೂ ಧಮ್ ಇದ್ದರೆ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸಚಿವ ಈಶ್ವರಪ್ಪ ಸವಾಲು ಹಾಕಿದ್ದಾರೆ.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷದ ಪರಿಸ್ಥಿತಿ ನೋಡಿ ಗಾಬರಿಗೊಂಡಿದ್ದಾರೆ. ಅವರ ಪಕ್ಷದಲ್ಲಿದ್ದವರು ಯಾವ ಪಕ್ಷಕ್ಕೆ ಹೋಗಲಿದ್ದಾರೋ, ಎಲ್ಲಿ ಉಳಿತಾರೋ ಒಂದೂ ಅವರಿಗೆ ತಿಳಿಯದಂತಾಗಿದೆ. ಮುಳುಗಿ ಹೋಗುವ ಹಡಗಿನಲ್ಲಿ ಯಾರೂ ಸಹ ಉಳಿಯಲು ಇಷ್ಟಪಡುವುದಿಲ್ಲ. ಈ ಮಧ್ಯೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಿಎಂ ಕುರ್ಚಿಗೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಈ ಜನ್ಮದಲ್ಲಿ ಸಾಧ್ಯವಿಲ್ಲ, ಅಂತಹುದರಲ್ಲಿ ಇವರಿಗೆ ಸಿಎಂ ಪಟ್ಟ ಎಲ್ಲಿ ದೊರೆಯಲಿದೆ ಎಂದು ಈಶ್ವರಪ್ಪ ಕಾಲೆಳೆದಿದ್ದಾರೆ.
ಮುಂದಿನ ಸಿಎಂ ನಾನೇ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ, ಜನ ವೋಟ್ ಹಾಕದಿದ್ದರೂ, ಕೇಂದ್ರ ನಾಯಕರೂ ಏನನ್ನೂ ಹೇಳದಿದ್ದರೂ ಸಹ ತಾವೇ ಮುಖ್ಯಮಂತ್ರಿ ಎಂದು ಬೀಗುತ್ತಿದ್ದಾರೆ. ಇದನ್ನು ಕಾಂಗ್ರೆಸ್ಸಿಗರು ಖಂಡಿಸಬೇಕು. ಡಿಕೆಶಿ ಯಾವಾಗಲೂ ದಮ್ ಬಗ್ಗೆ ಬಹಳ ಮಾತನಾಡುತ್ತಾರೆ. ಡಿಕೆಶಿಗೆ ದಮ್ ಇದ್ದರೆ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಲಿ, ಮುಖ್ಯಮಂತ್ರಿ ಎಂದು ಘೋಷಣೆ ಮಾಡಿಕೊಳ್ಳುವ ಅಧಿಕಾರ ನಿನಗಿಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ.